ಅಂಕೋಲಾ: KLE ಸಂಸ್ಥೆಯ ಪ್ರಾಯೋಗಿಕ ಪ್ರಾಥಮಿಕ ಶಾಲೆ, ಅಂಕೋಲಾದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ, ಪಾಲಕರಿಗಾಗಿ ಮನೋರಂಜನಾ ಆಟೋಪಾಟಗಳ ಸ್ಪರ್ಧೆಗಳನ್ನು ದಿನಾಂಕ, 24-12-2025 ರಂದು ಆಯೋಜಿಸಲಾಗಿತ್ತು.
ಶಾಲೆಯ ಮುಖ್ಯೋಧ್ಯಾಪಕರು ಹಾಗೂ ಶಿಕ್ಷಕವೃಂದದ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆಸಲಾದ ಈ ಕಾರ್ಯಕ್ರಮ ಪಾಲಕರಿಗೆ ಸಂತಸದ ಅನುಭವವನ್ನು ನೀಡಿತು.ಪಾಲಕರು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರುವುದನ್ನು ನೋಡಲು ಮಕ್ಕಳು ಕುತೂಹಲದಿಂದ ನೆರೆದಿದ್ದು, ತಮ್ಮ ತಂದೆ–ತಾಯಿಯ ಆಟವನ್ನು ನೋಡಿ ಮಕ್ಕಳಲ್ಲಿ ಅಪಾರ ಖುಷಿ ಮತ್ತು ಸಂಭ್ರಮ ವ್ಯಕ್ತವಾಯಿತು.
ಮಹಿಳೆಯರಿಗಾಗಿ ಕಣ್ಣು ಮುಚ್ಚಿ ಕಸಬರಗೆಯಿಂದ ಬಲೂನ್ ಹೊಡೆಯುವ ಸ್ಪರ್ಧೆ, ಜೊತೆಗೆ ಮಕ್ಕಳನ್ನು ಕಾಲಿನ ಮೇಲೆ ನಿಲ್ಲಿಸಿಕೊಂಡು ನಡೆಯುವ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿ ಮೂಡಿಬಂತು. ಈ ವೇಳೆ ಮಕ್ಕಳ ಹರ್ಷಭರಿತ ಚಪ್ಪಾಳೆಗಳು ಮೈದಾನವನ್ನೇ ತುಂಬಿದವು.ಇನ್ನೂ ಪುರುಷರಿಗಾಗಿ ಆಯೋಜಿಸಿದ್ದ ಬಾಲನ್ನು ಸಂಗ್ರಹಿಸುವ ಸ್ಪರ್ಧೆ ನೋಡುಗರ ಕಣ್ಮನ ಸೆಳೆಯುವಂತಿದ್ದು, ಪಾಲಕರು ಸಂಪೂರ್ಣ ಉತ್ಸಾಹದಿಂದ ಆಟೋಪಾಟಗಳಲ್ಲಿ ತೊಡಗಿದರು.
ಈ ಸ್ಪರ್ಧೆಗಳ ಮೂಲಕ ಪಾಲಕರು ತಮ್ಮ ಬಾಲ್ಯದ ಶಾಲಾ ದಿನಗಳ ಸಿಹಿ ನೆನಪುಗಳನ್ನು ಮತ್ತೆ ಜೀವಂತ ಮಾಡಿಕೊಂಡರು.ಎಲ್ಲಾ ಸ್ಪರ್ಧೆಗಳು ಮುಕ್ತಾಯವಾದ ಬಳಿಕ ಪಾಲಕರಿಗೆ ಫಲೋಪಹಾರವನ್ನು ವಿತರಿಸಲಾಯಿತು. ಈ ಸ್ಪರ್ಧೆಗಳಲ್ಲಿ ವಿಜೇತರಾದ ಪಾಲಕರಿಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ವಾರ್ಷಿಕ ಸ್ನೇಹ ಸಮ್ಮೇಳನದ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

ಸ್ನೇಹ ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ಶಾಲೆ–ಪಾಲಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಪಾಲಕರಿಗೆ ಖುಷಿಯ ನೆನಪಾಗಿ ಉಳಿದಿದೆ. ಈ ಕಾರ್ಯಕ್ರಮದಲ್ಲಿ ನಾನು ಕೂಡ ಒಬ್ಬ ಪಾಲಕರಾಗಿ ಭಾಗವಹಿಸಿದ್ದು, ಮುಂದಿನ ಸ್ನೇಹ ಸಮ್ಮೇಳನದ ಬಗ್ಗೆ ಹೆಚ್ಚಿನ ಉತ್ಸಾಹ ಮೂಡಿದೆ.
ವರದಿ: ಕಿರಣ ಗಾಂವಕರ

