ಕುಮಟಾ ವಕೀಲರ ಸಂಘದಲ್ಲಿ ಅದ್ದೂರಿಯಾಗಿ ನಡೆದ ವಕೀಲರ ದಿನಾಚರಣೆ..

News Desk
2 Min Read

ಕುಮಟಾ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರತಿವರ್ಷ ಅತ್ಯಂತ ವಿಜೃಂಭಣೆಯಿಂದ ವಕೀಲರ ದಿನಾಚರಣೆ ಆಚರಿಸುವ ಕುಮಟಾ ವಕೀಲರ ಸಂಘವು, ಈ ವರ್ಷವೂ ಡಿಸೆಂಬರ್ 3 ರಂದು ಅದ್ದೂರಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬೆಳಿಗ್ಗೆ 11.30 ಗಂಟೆಗೆ ಆರಂಭವಾದ ವೇದಿಕೆ ಕಾರ್ಯಕ್ರಮಕ್ಕೆ ಶ್ರೀಮತಿ ಭಾರತಿ ರಾಯಣ್ಣನವರು, ಹಿರಿಯ ಸಿವಿಲ್ ನ್ಯಾಯಾಧೀಶರು, ಉದ್ಘಾಟಕರಾಗಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಜಾಯ್ಲಿನ್ ಮೆಂಡೋನ್ಸ, ಪ್ರಧಾನ ಸಿವಿಲ್ ನ್ಯಾಯಾಧೀಶರು, ಮತ್ತು ಶ್ರೀಮತಿ ವರ್ಷಶ್ರೀ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಭಾಗವಹಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕುಂದಾಪುರದ ಹಿರಿಯ ವಕೀಲರಾದ ಶ್ರೀ ರಮೇಶ್ ಹತ್ವಾರ್ ಅವರು ಪಾಲ್ಗೊಂಡಿದ್ದು, ಜೂನಿಯರ್ ವಕೀಲರಿಗೆ ‘ನ್ಯಾಯಾಲಯದಲ್ಲಿ ಪ್ರಕರಣಗಳನ್ನು ನಡೆಸುವ ವಿಧಾನ’ ಮತ್ತು ‘ಪಾಟೀ ಸವಾಲು ಮಾಡುವ ಕಲೆ’ ಕುರಿತು ಅಗಾಧ ಜ್ಞಾನ ಹಂಚಿಕೊಂಡರು.

ಕಾರ್ಯಕ್ರಮಕ್ಕೆ ಮಮತಾ ಆರ್. ನಾಯ್ಕ್, ಅಧ್ಯಕ್ಷರು, ವಕೀಲರ ಸಂಘ ಕುಮಟಾ, ಘನ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ವಸುಧಾ ಶಾಸ್ತ್ರಿ, ಉಪಾಧ್ಯಕ್ಷರು, ಮೀನಾಕ್ಷಿ ಯು. ನಾಯ್ಕ್, ಕಾರ್ಯದರ್ಶಿ ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮೀನಾಕ್ಷಿ ಯು. ನಾಯ್ಕ್ ಅವರು ಸ್ವಾಗತಿಸಿದರು. ದೀಪ ಬೆಳಗುವುದರೊಂದಿಗೆ ಉದ್ಘಾಟನೆ ನೆರವೇರಿತು. ಅತಿಥಿಗಳು ವಕೀಲರ ಸೇವೆ, ನ್ಯಾಯಸೇವೆ ಮತ್ತು ವೃತ್ತಿನೈತಿಕ ಮೌಲ್ಯಗಳ ಕುರಿತು ಹಿತನುಡಿ ಹಂಚಿಕೊಂಡರು.

ಈ ಸಂದರ್ಭ ಸಂಘದ ಹಿರಿಯ ಸದಸ್ಯರು ಮತ್ತು ತೆರಿಗೆ ಸಲಹೆಗಾರರಾದ ಶ್ರೀ ಕೆ.ಎಸ್. ಭಟ್ ವಕೀಲರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂತ್ಯದಲ್ಲಿ ಮಮತಾ ಆರ್. ನಾಯ್ಕ್ ಅಧ್ಯಕ್ಷೀಯ ಮಾತುಗಳನ್ನಾಡಿ ಕಾರ್ಯಕ್ರಮದ ಸಂದೇಶವನ್ನು ನೀಡಿದರು. ವಂದನೆಯನ್ನು ಶಾಂತಿಕಾ ಡಿ. ನಾಯ್ಕ್ ವಕೀಲರು ಸಲ್ಲಿಸಿದರು; ಕಾರ್ಯಕ್ರಮ ನಿರೂಪಣೆಯನ್ನು ಶ್ರೀನಿವಾಸ ಜೆ. ನಾಯ್ಕ್ ವಕೀಲರು ಸುಂದರವಾಗಿ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಕುಮಟಾ ವಕೀಲರ ಸಂಘದ ಹಿರಿಯ–ಕಿರಿಯರು, ನ್ಯಾಯಾಲಯದ ಸಿಬ್ಬಂದಿಗಳು, ಪೊಲೀಸರು ಹಾಗೂ ಎಪಿಪಿಯವರು ಸಂಖ್ಯಾಬಲದಿಂದ ಹಾಜರಿದ್ದರು. ಮಧ್ಯಾಹ್ನ ವಕೀಲರು ಮತ್ತು ಸಿಬ್ಬಂದಿಗಳಿಗಾಗಿ ಮನರಂಜನಾ ಆಟ – ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಮತ್ತು ವಿಶೇಷ ಮನರಂಜನಾ ಕಾರ್ಯಕ್ರಮದೊಂದಿಗೆ ವಕೀಲರ ದಿನಾಚರಣೆ ಯಶಸ್ವಿಯಾಗಿ ಸಂಪನ್ನಗೊಂಡಿತು.

Share This Article