ತನ್ನ ಖರ್ಚಿನಲ್ಲಿ ಅಪಾಯಕಾರಿ ರಸ್ತೆಯ ಹೊಂಡ ಮುಚ್ಚಿದ ಶಿರಸಿ ನಗರಸಭೆ ಮಾಜಿ ಸದಸ್ಯ ‘ಜಿಮ್ ನಾಗ’; ಸಾರ್ವಜನಿಕ ಕಾಳಜಿಗೆ ಜನರಿಂದ ಮೆಚ್ಚುಗೆ..

News Desk
1 Min Read

ಶಿರಸಿ: ನಗರದಲ್ಲಿ ಮೂಲಸೌಕರ್ಯ ಸಮಸ್ಯೆಗಳನ್ನು ನೋಡದಿರುವ ಸಂಬಂಧಿತ ಇಲಾಖೆಗಳ ವಿರುದ್ಧ ಸಾರ್ವಜನಿಕ ಅಸಮಾಧಾನ ಹೆಚ್ಚುತ್ತಿರುವ ಸಂದರ್ಭದಲ್ಲಿ, ಶಿರಸಿ ನಗರದ 20ನೇ ವಾರ್ಡ್‌ನ ಮಾಜಿ ನಗರಸಭೆ ಸದಸ್ಯ ನಾಗರಾಜ ನಾಯ್ಕ (ಜಿಮ್ ನಾಗ) ಅವರು ನಿಜವಾದ ಸೇವೆ ಮನೋಭಾವ ತೋರಿಸಿದ್ದಾರೆ.

ನಿನ್ನೆ ಬೆಳ್ಳಂಬೆಳಿಗ್ಗೆ, ಅಂಬೇಡ್ಕರ್ ಸರ್ಕಲ್ ಬಳಿ ಕಳೆದ ಕೆಲವು ವಾರಗಳಿಂದ ನಾಗರಿಕರಿಗೆ ತೊಂದರೆ, ಅಪಘಾತದ ಭಯ ಮತ್ತು ಜೀವರಕ್ಷಣೆಗೂ ಆತಂಕ ಮೂಡಿಸುತ್ತಿದ್ದ ದೊಡ್ಡ ಹೊಂಡವನ್ನು ಸ್ವತಃ ತಮ್ಮ ಖರ್ಚಿನಲ್ಲಿ ಸಿಮೆಂಟ್ ಮತ್ತು ಜಲ್ಲಿಯನ್ನು ತರಿಸಿ, ತಾವು ತಾನೇ ಕಲಸಿ, ಭದ್ರವಾಗಿ ತುಂಬಿಸುವ ಕಾರ್ಯ ನೆರವೇರಿಸಿದರು.

ಈ ಕಾರ್ಯಕ್ಕೆ ಸ್ಥಳೀಯರಾದ ರಘು ಕಾನಡೆ, ಅಶ್ವತ್ ಹಲಗೇರಿಕರ್, ಜೋನ್ ಫರ್ನಾಂಡೀಸ್ ಮತ್ತು ರೋಶನ್ ನೇತ್ರಕರ್ ತಮ್ಮ ಶ್ರಮ ನೀಡಿದರು.ನಾಗರಾಜ ನಾಯ್ಕ ಅವರು ಮಾತನಾಡಿ ಹೀಗೆ ಹೇಳಿದರು:“ನಗರದ ರಸ್ತೆಗಳಲ್ಲೇ ಇಂತಹ ಅನೇಕ ಹೊಂಡಗಳಿವೆ. ಬೇಸಿಗೆ ಕಾಲ ಬಂದಿರುವುದರಿಂದ ಹೊಂಡಗಳನ್ನು ಸರಿಪಡಿಸಲು ಇದು ಸೂಕ್ತ ಸಮಯ. ಸಂಬಂಧಿತ ಇಲಾಖೆ ತ್ವರಿತ ಕ್ರಮ ಕೈಗೊಂಡರೆ ಅಪಘಾತಗಳನ್ನು ತಪ್ಪಿಸಬಹುದು. ಸಾವುನೋವು ಸಂಭವಿಸಿದ ಮೇಲಿನ ಕ್ರಮದ ಬದಲು, ಮುನ್ನೆಚ್ಚರಿಕೆಯೇ ಉತ್ತಮ” ಎಂದು ಅವರು ಕೋರಿದರು.

ನಗರಸಭೆಯ ಆಯ್ಕೆಯಾದ ಸದಸ್ಯರ ಅವಧಿ ಮುಗಿದರೂ ಕೂಡ, ‘ಸ್ಥಾನ ಬದಲಾಗಿದೆ – ಆದರೆ ಸೇವೆ ನಿಂತಿಲ್ಲ’ ಎಂಬ ಮನೋಭಾವದೊಂದಿಗೆ ನಾಗರಾಜ ನಾಯ್ಕ ಅವರು ತಮ್ಮ ಕಾರ್ಯ ಮುಂದುವರಿಸುತ್ತಿರುವುದು ಸ್ಥಳೀಯರಿಂದ ಮೆಚ್ಚುಗೆ ಪಡೆಯುತ್ತಿದೆ.

ನಗರದಲ್ಲಿ ಇತರೆ ರಸ್ತೆಗಳಲ್ಲಿ ಕೂಡ ಇದೇ ರೀತಿಯಾಗಿ ಹೊಂಡಗಳು ಕಂಡುಬರುತ್ತಿವೆ. ಆದ್ದರಿಂದ ಸಂಬಂಧಿಸಿದ ಇಲಾಖೆಗಳು ತಕ್ಷಣವೇ ಸ್ಥಳ ಪರಿಶೀಲನೆ ಮಾಡಿ, ಶಿರಸಿ ನಗರದ ಪ್ರಮುಖ ರಸ್ತೆಗಳನ್ನು ಸುರಕ್ಷಿತವಾಗಿ ಪರಿಷ್ಕರಿಸುವ ಕೆಲಸಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Share This Article