ಅಮದಳ್ಳಿಯಿಂದ ಅರಗಾವರೆಗೆ ಹೆದ್ದಾರಿಯಲ್ಲೇ ಬೀಡುಬಿಟ್ಟಿರುವ ಜಾನುವಾರುಗಳು; ಮಾಲೀಕರ ಬೇಜವಾಬ್ದಾರಿಗೆ ಬಲಿಯಾಗುತ್ತಿವೆ ಮೂಕ ಪ್ರಾಣಿಗಳು..

News Desk
2 Min Read

ಕಾರವಾರ: ಕಾರವಾರ ತಾಲೂಕು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಅಮದಳ್ಳಿಯಿಂದ ಹಿಡಿದು ಕದಂಬ ನೌಕಾನೆಲೆಯಿರುವ ಅರಗಾ ಗ್ರಾಮದವರೆಗೆ, ಬಿಡಾಡಿ ದನಗಳ ಹಾವಳಿ ಮಿತಿಮೀರಿದೆ.ಹಗಲು-ರಾತ್ರಿ ಎನ್ನದೆ ರಸ್ತೆಯ ಮಧ್ಯದಲ್ಲಿಯೇ ಗುಂಪುಗುಂಪಾಗಿ ಮಲಗುವ ಈ ಜಾನುವಾರುಗಳಿಂದಾಗಿ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯಾಗುವುದಲ್ಲದೆ, ಸರಣಿ ಅಪಘಾತಗಳಿಗೂ ಕಾರಣವಾಗುತ್ತಿದೆ.

ಇದರಿಂದಾಗಿ ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು, ಅಕ್ಷರಶಃ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ಪ್ರಮುಖ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಮಸ್ಯೆ ಮತ್ತಷ್ಟು ಜಟಿಲಗೊಳ್ಳುತ್ತದೆ. ಒಂದೆಡೆ ಹೆದ್ದಾರಿಯ ಈ ಭಾಗದಲ್ಲಿ ಬೀದಿದೀಪಗಳ ವ್ಯವಸ್ಥೆ ಇಲ್ಲದಿರುವುದು, ಮತ್ತೊಂದೆಡೆ ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕಿಗೆ ಚಾಲಕರ ಕಣ್ಣುಗಳು ಕುಕ್ಕಿ, ರಸ್ತೆಯಲ್ಲಿ ಮಲಗಿರುವ ಜಾನುವಾರುಗಳು ಗೋಚರಿಸುವುದಿಲ್ಲ. ಪರಿಣಾಮವಾಗಿ, ವೇಗವಾಗಿ ಬರುವ ವಾಹನಗಳು ಇವುಗಳಿಗೆ ಗುದ್ದಿ, ಸವಾರರು ಪ್ರಾಣಾಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಈ ದುರ್ಘಟನೆಗಳಲ್ಲಿ ಅಮಾಯಕ ಜಾನುವಾರುಗಳ ಪ್ರಾಣಕ್ಕೂ ಅಪಾಯ ಒದಗುತ್ತಿದೆ.ಈ ಹಾವಳಿಯು ಕೇವಲ ಹೆದ್ದಾರಿಗೆ ಮಾತ್ರ ಸೀಮಿತವಾಗಿಲ್ಲ. ಕಾರವಾರ ನಗರದ ಮುಖ್ಯ ರಸ್ತೆಗಳು ಈ ದನಗಳು ಸಂಜೆ-ರಾತ್ರಿ ವೇಳೆ ಗುಂಪಾಗಿ ಮಲಗಿರುತ್ತವೆ. ಹಗಲೆಲ್ಲಾ ಸೂರ್ಯನ ತಾಪಕ್ಕೆ ಕಾದ ರಸ್ತೆಗಳು, ರಾತ್ರಿ ವೇಳೆ ಬೆಚ್ಚಗಿರುವುದರಿಂದ ಈ ಜಾನುವಾರುಗಳು ರಸ್ತೆಗಳನ್ನೇ ಆಶ್ರಯಿಸುತ್ತವೆ.

ಮಾಲೀಕರ ಬೇಜವಾಬ್ದಾರಿಯೇ ಮೂಲ ಕಾರಣ:

“ಮೂಕ ಪ್ರಾಣಿಗಳಾದ ಇವುಗಳಿಗೆ ಏನು ಅರಿವಿರುವುದಿಲ್ಲ. ಆದರೆ ಅವುಗಳನ್ನು ಸಾಕಿದ ಮಾಲೀಕರ ಬೇಜವಾಬ್ದಾರಿಯೇ ಈ ಎಲ್ಲಾ ಅನಾಹುತಗಳಿಗೆ ಮೂಲ ಕಾರಣ. ತಮ್ಮ ಜಾನುವಾರುಗಳನ್ನು ಹೀಗೆ ಬೇಕಾಬಿಟ್ಟಿ ರಸ್ತೆಗಳಿಗೆ ಬಿಡುವುದರಿಂದ, ಅವುಗಳ ಜೀವಕ್ಕೂ ಸಂಚಕಾರ ತರುತ್ತಿದ್ದಾರೆ. ಮಾಲೀಕರು ತಮ್ಮ ಜವಾಬ್ದಾರಿಯನ್ನು ಅರಿಯಬೇಕು” ಎಂದು ಸವಾರರು ಅಭಿಪ್ರಾಯಪಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದ ಜನರು ಕೃಷಿಯಿಂದ ವಿಮುಖರಾಗುತ್ತಿರುವುದರಿಂದ, ಜಾನುವಾರುಗಳ ಪಾಲನೆ ಮಾಡಲಾಗದೆ ಅವುಗಳನ್ನು ಬೀದಿಗೆ ಬಿಡುತ್ತಿರುವುದೇ ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು, ಈ ಜಾನುವಾರುಗಳನ್ನು ಗೋಶಾಲೆಗಳಿಗೆ ಸ್ಥಳಾಂತರಿಸಲು ಅಥವಾ ಅವುಗಳ ಮಾಲೀಕರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಬಲವಾಗಿ ಆಗ್ರಹಿಸಿದ್ದಾರೆ.

Share This Article