ಅಕ್ಟೋಬರ್ 7 ರಿಂದ 9ರವರೆಗೆ ಅಂಕೋಲದಲ್ಲಿ ರಾಜ್ಯಮಟ್ಟದ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ..

News Desk
2 Min Read

ಅಂಕೋಲಾ, ಅ.5: ಅಂಕೋಲಾ ನಾಡವರ ಸಮುದಾಯ ಭವನದಲ್ಲಿ ಅಕ್ಟೋಬರ್ 7, 8 ಮತ್ತು 9ರಂದು ರಾಜ್ಯಮಟ್ಟದ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ ಭರ್ಜರಿಯಾಗಿ ನಡೆಯಲಿದೆ. ಈ ಕುರಿತು ಇಂದು ಆಯೋಜಕರು ಗಣೇಶ್ ಗುನುಗ ಮತ್ತು ಪ್ರಮುಖರು ಗುರುಪ್ರಸಾದ್ ಹೋಟೆಲ್‌ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡರು.

ಮೇಳವು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.ಈ ಮೇಳದಲ್ಲಿ ನೈಸರ್ಗಿಕ ಸೌಂದರ್ಯ ವರ್ಧಕಗಳು, ಖಾದಿ ಉತ್ಪನ್ನಗಳು, ದೇಶೀಯ ಆಹಾರಗಳು, ನಿತ್ಯ ಬಳಕೆ ವಸ್ತುಗಳು, ಇಳಕಲ್ ಸೀರೆಗಳು, ಹಣ್ಣು-ಹೂವಿನ ಗಿಡಗಳು, ತರಕಾರಿ ಬೀಜಗಳು ಸೇರಿದಂತೆ ನಾನಾ ಬಗೆಯ ಸ್ವದೇಶಿ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗುತ್ತವೆ.

ಗಣೇಶ್ ಗುನುಗ – ಹೊಸ ಆಲೋಚನೆಯಿಂದ ಅವಕಾಶ ಸೃಷ್ಟಿಸಿದ ಉದ್ಯಮಿ

ಅಂಕೋಲದ ಸೂರ್ವೆ ಗ್ರಾಮದ ಯುವ ಉದ್ಯಮಿ ಗಣೇಶ್ ಗುನುಗ , ತಮ್ಮ ಶ್ರಮ, ದೃಢಸಂಕಲ್ಪ ಮತ್ತು ಹೊಸ ಆಲೋಚನೆಯಿಂದ ಉದ್ಯಮದ ಲೋಕದಲ್ಲಿ ವಿಶಿಷ್ಟ ಗುರುತು ಮೂಡಿಸಿರುವ ಯುವಕ.ಆರಂಭದಲ್ಲಿ ಡ್ರೈ ಫ್ರೂಟ್ಸ್ ವ್ಯಾಪಾರದಿಂದ ಅಲ್ಪ ಆದಾಯ ಗಳಿಸುತ್ತಿದ್ದ ಗಣೇಶ್, ಉತ್ತರ ಕನ್ನಡದ ಉತ್ಪನ್ನಗಳಿಗೆ ರಾಜ್ಯದಾದ್ಯಂತ ಇರುವ ಬೇಡಿಕೆ ಮನಗಂಡು ವ್ಯಾಪಾರ ವಿಸ್ತರಣೆ ನಡೆಸಿದರು.

ಅವರು ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಮಾವು ಮೇಳದಲ್ಲಿ ಅಂಕೋಲಾದ ಕರಿ ಇಶಾಡ ಮಾವಿನ ಹಣ್ಣು ಪ್ರದರ್ಶನಕ್ಕಿಟ್ಟಿದ್ದರು. ಆ ವೇಳೆ ಈ ಮಾವಿನ ಹಣ್ಣು ದಾಖಲೆ ಮಟ್ಟದಲ್ಲಿ ಮಾರಾಟವಾಗಿ ಗಣೇಶ್ ಅವರಿಗೆ ಉತ್ತಮ ಲಾಭ ತಂದಿತ್ತು.

ವಿಶೇಷವಾಗಿ ಜಪಾನ್ ಮೂಲದ “ಮಿಯಾ ಜಾಕಿ” ಎಂಬ ದುಬಾರಿ ತಳಿಯ ಮಾವಿನ ಹಣ್ಣು ಬೆಳೆದು, ಒಂದೊಂದು ಹಣ್ಣನ್ನು ₹2,000ಕ್ಕೆ ಮಾರಾಟ ಮಾಡಿದ ಅನುಭವವು ಅವರಿಗೆ ಹೊಸ ಆತ್ಮವಿಶ್ವಾಸ ನೀಡಿದೆ.ಜಪಾನಿನಲ್ಲಿ ಈ ಹಣ್ಣು ಕೆಜಿಗೆ ₹2.5 ಲಕ್ಷವರೆಗೆ ಮಾರಾಟವಾಗುತ್ತದೆ. ಅದರ ವಿಶಿಷ್ಟ ಸಿಹಿತನ ಮತ್ತು ಆರೋಗ್ಯಕಾರಿ ಗುಣಗಳು ವಿಶ್ವದಾದ್ಯಂತ ಪ್ರಸಿದ್ಧವಾಗಿವೆ.

ಬಕುಳ ಫುಡ್ ಪ್ರಾಡಕ್ಟ್ಸ್ – ಗ್ರಾಮೀಣ ಬ್ರಾಂಡ್‌ನಿಂದ ರಾಜ್ಯಮಟ್ಟದ ಹೆಜ್ಜೆ

ಕೊರೋನಾ ಕಾಲದಲ್ಲಿ ಜೀವನದ ಹೊಸ ದಾರಿಯನ್ನು ಕಂಡುಕೊಂಡ ಗಣೇಶ್, ಸೋಶಿಯಲ್ ಮೀಡಿಯಾ ಮೂಲಕ ತನ್ನ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಿಸಿ, ಈಗಾಗಲೇ ಮೂರು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ. ‘ಬಕುಳ ಫುಡ್ ಪ್ರಾಡಕ್ಟ್ಸ್’ ಎಂಬ ಹೆಸರಿನಲ್ಲಿ ತಮ್ಮ ಸ್ವಂತ ಬ್ರಾಂಡ್ ಸೃಷ್ಟಿಸಿಕೊಂಡು, 500ಕ್ಕೂ ಹೆಚ್ಚು ಸಕ್ರಿಯ ಗ್ರಾಹಕರನ್ನು ಗಳಿಸಿದ್ದಾರೆ.

ಯುವಕರಿಗೆ ಸ್ಪೂರ್ತಿ – “ದುಡಿಯುವ ಕೈಗಳು ಚೆನ್ನಾಗಿರಲಿ”

“ಯಾವುದೇ ಕೆಟ್ಟ ವ್ಯಸನಗಳಿಗೆ ಬಲಿಯಾಗದೆ, ಸ್ವ ಉದ್ಯೋಗದ ಮೂಲಕ ಮಾರುಕಟ್ಟೆಯಲ್ಲಿ ಬೇಡಿಕೆಯ ವಸ್ತುಗಳನ್ನು ಮಾರಾಟ ಮಾಡಿ ಲಾಭ ಗಳಿಸಬಹುದು” ಎಂಬ ನಂಬಿಕೆಯನ್ನು ಗಣೇಶ್ ಗುನುಗ ಹೊಂದಿದ್ದಾರೆ.ಸ್ವದೇಶಿ ಮೇಳದ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡುವಂತೆ ಅವರು ಜನತೆಗೆ ಮನವಿ ಮಾಡಿದ್ದಾರೆ.

“ದುಡಿಯುವ ಕೈಗಳು ಚೆನ್ನಾಗಿರಲಿ, ಸ್ವದೇಶಿ ವಸ್ತುಗಳಿಗೆ ಬೆಂಬಲ ದೊರೆಯಲಿ” ಎಂಬ ಉದ್ದೇಶದಿಂದ ಈ ಮೇಳ ಆಯೋಜನೆ ಯಾಗಿದೆ.ಅಂಕೋಲ ಜನತೆ ಈ ಮೇಳಕ್ಕೆ ಉತ್ತಮ ಸ್ಪಂದನ ನೀಡುವರು ಎಂಬ ಭರವಸೆಯನ್ನು ಗಣೇಶ್ ವ್ಯಕ್ತಪಡಿಸಿದ್ದಾರೆ.

Share This Article