ಜಿಲ್ಲೆಯ ಏಕೈಕ ಎಂ.ಎ ಅರ್ಥಶಾಸ್ತ್ರ ಸ್ನಾತಕೋತ್ತರ ಕೇಂದ್ರ ಸ್ಥಗಿತದ ಅಂಚಿನಲ್ಲಿ – 50% ಪ್ರವೇಶ ನಿಯಮದ ನೆಪದಿಂದ ವಿದ್ಯಾರ್ಥಿಗಳು ಅತಂತ್ರ..

News Desk
2 Min Read

ಅಂಕೋಲಾ : ಪೂಜಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ಹತ್ತು ವರ್ಷಗಳಿಂದ ನಡೆಯುತ್ತಿರುವ ಜಿಲ್ಲೆಯ ಏಕೈಕ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗವನ್ನು ಈ ವರ್ಷ ಸ್ಥಗಿತಗೊಳಿಸುವ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಈ ಬಾರಿ ಕೌನ್ಸಿಲಿಂಗ್ ಮೂಲಕ ಕೇವಲ ನಾಲ್ವರು ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದ ಕಾರಣ, 50% ಪ್ರವೇಶ ನಿಯಮದ ನೆಪದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ತಡೆಯಲ್ಪಟ್ಟಿದೆ. ಆದರೆ ಹಿಂದಿನ ವರ್ಷಗಳಲ್ಲಿಯೂ 50% ಪ್ರವೇಶ ದೊರೆಯದ ಸಂದರ್ಭಗಳಿದ್ದರೂ ಉಪನ್ಯಾಸಕರನ್ನು ನೇಮಿಸಲಾಗಿತ್ತು ಎಂಬುದು ಅತಿಥಿ ಉಪನ್ಯಾಸಕರ ಪ್ರಶ್ನೆ.

ಕಾರ್ಯಭಾರ ಮತ್ತು ನಿಯಮದ ಗೊಂದಲ

ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಸೇರಿ ಒಟ್ಟು 72 ಗಂಟೆಗಳ ಕಾರ್ಯಭಾರವಿದ್ದು, ಮೂವರು ಖಾಯಂ ಉಪನ್ಯಾಸಕರ ನಂತರ ಇಬ್ಬರು ಅತಿಥಿ ಉಪನ್ಯಾಸಕರಿಗೆ ಅವಕಾಶ ಸಿಗುತ್ತದೆ. ಈ ಹಿಂದಿನಂತೆ ಕಾರ್ಯಭಾರ ಮುಂದುವರಿದರೂ ಈ ಬಾರಿ ಮಾತ್ರ ಅತಿಥಿ ಉಪನ್ಯಾಸಕರ ಮುಂದುವರಿಕೆಗೆ ಅಡ್ಡಿ ತರುವ ಪ್ರಯತ್ನವಾಗಿದೆ.ದ್ವಿತೀಯ ವರ್ಷದಲ್ಲಿಯೂ ಕೇವಲ 9 ವಿದ್ಯಾರ್ಥಿಗಳಿದ್ದರೂ ಬೋಧನೆ ನಡೆಯುತ್ತಿದೆ. ಹೀಗಿರಲು ಪ್ರಥಮ ವರ್ಷದ ನಾಲ್ವರು ವಿದ್ಯಾರ್ಥಿಗಳ ಆಧಾರದ ಮೇಲೆ ಮಾತ್ರ ನಿಯಮ ಕಠಿಣವಾಗಿರುವುದು ಏಕೆ ಎಂಬುದು ಪ್ರಶ್ನೆ.

ಮಧ್ಯಪ್ರವೇಶ ಮಾಡಿದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ

ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವಲ್ಲಿ ಹಿಂಜರಿಕೆಯಾದ ಹಿನ್ನೆಲೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಂಜೇಶ್ವರ ನಾಯಕ ಮಧ್ಯಪ್ರವೇಶಿಸಿ ಶನಿವಾರವೇ ಪ್ರವೇಶ ಕಲ್ಪಿಸಲು ಸೂಚಿಸಿದರು. ಆದರೆ ಅತಿಥಿ ಉಪನ್ಯಾಸಕರ ನೇಮಕಾತಿ ಇನ್ನೂ ಬಗೆಹರಿದಿಲ್ಲ.

ಸ್ಥಳೀಯರ ಬೇಡಿಕೆ: ಗ್ರಾಮೀಣ ಪ್ರದೇಶದಲ್ಲಿರುವ ಜಿಲ್ಲೆಯ ಏಕೈಕ ಸ್ನಾತಕೋತ್ತರ ಕೇಂದ್ರವನ್ನು ಉಳಿಸಲು, “50% ಪ್ರವೇಶ ನಿಯಮ ಕೈಬಿಟ್ಟು ಕಾರ್ಯಭಾರದ ಆಧಾರದಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕು” ಎಂದು ಸ್ಥಳೀಯರು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಕೇಂದ್ರವೇ ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ರಾಜಕೀಯದ ವಾಸನೆ: ಕಾಲೇಜಿನ ಒಳಾಂಗಣ ರಾಜಕೀಯ ಹಾಗೂ ಗುಂಪುಗಾರಿಕೆ ಕಾರಣಕ್ಕೂ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. “ಮಂತ್ರಿಗಳ ಶಿಫಾರಸ್ಸಿನಿಂದ ಬಂದಿದ್ದೇನೆ” ಎಂದ ಸಿಬ್ಬಂದಿಗೆ ಅಭಿವೃದ್ಧಿ ಸಮಿತಿಯವರು ತರಾಟೆ ತೆಗೆದುಕೊಂಡು, ರಾಜಕೀಯ ಹೆಸರನ್ನು ವಿದ್ಯಾರ್ಥಿಗಳ ಹಿತಕ್ಕೆ ಮಾತ್ರ ಬಳಸಬೇಕು ಎಂದು ಎಚ್ಚರಿಸಿದ್ದಾರೆ.

ಸ್ಪಷ್ಟ ಕ್ರಮಕ್ಕೆ ಒತ್ತಾಯ: “ಹಿಂದಿನ ವರ್ಷಗಳಂತೆ ಈ ವರ್ಷವೂ ವ್ಯವಸ್ಥೆ ಮುಂದುವರಿಯಬೇಕು. ಬೇರೆಡೆಗೆ ವಿದ್ಯಾರ್ಥಿಗಳನ್ನು ವರ್ಗಾವಣೆ ಮಾಡುವ ಬದಲು ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಬೇಕು” ಎಂದು ಉಪನ್ಯಾಸಕರು ಬೇಡಿಕೆ ಇಟ್ಟಿದ್ದಾರೆ.ಶಿಕ್ಷಣ ಇಲಾಖೆ, ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳು ತಕ್ಷಣ ಮಧ್ಯಪ್ರವೇಶಿಸಿ ಜಿಲ್ಲೆಯ ಏಕೈಕ ಎಂ.ಎ ಅರ್ಥಶಾಸ್ತ್ರ ಸ್ನಾತಕೋತ್ತರ ಕೇಂದ್ರವನ್ನು ಉಳಿಸುವಂತೆ ಒತ್ತಾಯಿಸಲಾಗಿದೆ.

Share This Article