ಅಂಕೋಲಾ: “ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ, ಯಲ್ಲಾಪುರ ಘಟಕಗಳಿಂದ ಸಂಚರಿಸುತ್ತಿರುವ ನಿರ್ವಾಹಕ ರಹಿತ (ನಾನ್ ಸ್ಟಾಪ್) ಬಸ್‌ಗಳು ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟುಮಾಡುತ್ತಿವೆ.
ಕೆಲವು ವರ್ಷಗಳ ಹಿಂದೆ ಚಾಲಕ ಹಾಗೂ ನಿರ್ವಾಹಕರ ಕೊರತೆ ಇದ್ದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಈ ರೀತಿಯ ಬಸ್ ಸೇವೆಯನ್ನು ಆರಂಭಿಸಲಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹೆಚ್ಚಿನ ಸಿಬ್ಬಂದಿಯನ್ನು ನೇಮಿಸುವ ಅವಕಾಶ ಇದ್ದರೂ ಸಂಸ್ಥೆ ಲಾಭದ ಬದಲು ನಷ್ಟದ ದಾರಿಗೆ ಸಾಗುತ್ತಿದೆ” ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ (ಉತ್ತರ ಕನ್ನಡ) ಮೋಹಿನಿ ನಾಯ್ಕ್ ತಿಳಿಸಿದ್ದಾರೆ.
ಅವರು ಮುಂದುವರಿದು, “ಈ ಬಸ್‌ಗಳು ಜನವಸತಿ ಪ್ರದೇಶಗಳಲ್ಲಿ ನಿಲ್ಲದೆ ಸಂಚರಿಸುವುದರಿಂದ ದೇವಸ್ಥಾನಗಳಿಗೆ, ಆಸ್ಪತ್ರೆಗಳಿಗೆ, ವಿವಿಧ ಕಾರ್ಯಕ್ರಮಗಳಿಗೆ ಹೋಗುವ ಗ್ರಾಮೀಣ ಪ್ರದೇಶದ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಲೆ ಮತ್ತು ಕಾಲೇಜು ಮಕ್ಕಳಿಗೆ ಸಮಯಕ್ಕೆ ತಲುಪುವುದು ಕಷ್ಟವಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ನಿರ್ವಾಹಕ ರಹಿತ ವಾಹನದ ಅಗತ್ಯವೇ ಇಲ್ಲ. ಎಲ್ಲ ಪ್ರಮುಖ ಸ್ಟಾಪ್‌ಗಳು ರಾಷ್ಟ್ರೀಯ ಹೆದ್ದಾರಿಯಲ್ಲಿವೆ, ಹಳ್ಳಿ ಹಳ್ಳಿಗಳಿಗೆ ಒಳಹೋಗುವ ಅವಶ್ಯಕತೆಯೇ ಇಲ್ಲ. ಇದುವರೆಗೂ ಯಾವುದೇ ಸಾರ್ವಜನಿಕರು ಈ ರೀತಿಯ ಸೇವೆಗಾಗಿ ಮನವಿ ಕೂಡ ಸಲ್ಲಿಸಿಲ್ಲ” ಎಂದರು.

“ಸಾರಿಗೆ ಸಂಸ್ಥೆ ಸಾರ್ವಜನಿಕ ಸೇವೆಗೆ ಹೊಣೆಗಾರವಾಗಿದೆ. ಜನರ ಹಿತವನ್ನು ಕಡೆಗಣಿಸಿ ನಿರ್ವಾಹಕ ರಹಿತ ವಾಹನಗಳನ್ನು ಓಡಿಸುವುದು ಸಂಸ್ಥೆಗೆ ನಷ್ಟವನ್ನು ಉಂಟುಮಾಡುತ್ತದೆ. ಚಾಲಕನೇ ಟಿಕೆಟ್ ನೀಡುವ ಕೆಲಸವನ್ನು ಮಾಡಬೇಕಾಗಿದ್ದು, ಅವನ ಮೇಲೆ ಅನಾವಶ್ಯಕ ಒತ್ತಡ ಬೀಳುತ್ತದೆ. ಇದರಿಂದ ಸೇವೆಯ ಗುಣಮಟ್ಟ ಹದಗೆಡುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರ ಪ್ರಯಾಣ ಹೆಚ್ಚಾಗಿರುವ ಈ ಸಮಯದಲ್ಲಿ ಪ್ರತಿಯೊಂದು ಬಸ್ ಎಲ್ಲ ಸ್ಟಾಪ್‌ಗಳಲ್ಲಿ ನಿಲ್ಲುವುದು ಅಗತ್ಯ. ಇದರಿಂದ ಸಂಸ್ಥೆಯ ಕಲೆಕ್ಷನ್ ಕೂಡ ಹೆಚ್ಚುತ್ತದೆ” ಎಂದು ಹೇಳಿದರು.
ಅಂತಿಮವಾಗಿ, “ಸಾರ್ವಜನಿಕರ ಹಿತವನ್ನು ಗಮನಿಸಿ ತಕ್ಷಣ ಚಾಲಕ ಮತ್ತು ನಿರ್ವಾಹಕರನ್ನು ನೇಮಿಸಿ, ನಿರ್ವಾಹಕ ರಹಿತ ಸೇವೆಯನ್ನು ನಿಲ್ಲಿಸಿ, ಸಾಮಾನ್ಯ ಬಸ್‌ಗಳಂತೆ ಎಲ್ಲ ಸ್ಟಾಪ್‌ಗಳಲ್ಲಿ ನಿಲ್ಲುವ ವ್ಯವಸ್ಥೆ ಜಾರಿಗೆ ತರಬೇಕು” ಎಂದು ಮೋಹಿನಿ ನಾಯ್ಕ್ ಆಗ್ರಹಿಸಿದರು.ಈ ಸಂಬಂಧವಾಗಿ ಅವರು ಇಂದು (22-09-2025) ಅಂಕೋಲ ಘಟಕ ವ್ಯವಸ್ಥಾಪಕಿ ಚೈತನ್ಯ ಅಗಳಗಟ್ಟಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ವರದಿ: ಕಿರಣ ಚಂದ್ರಹಾಸ ಗಾಂವಕರ

