ಅಂಕೋಲಾ : ಪುರಸಭೆ ವ್ಯಾಪ್ತಿಯ ಅಜ್ಜಿಕಟ್ಟ ಬಸ್ ತಂಗುದಾಣ ಎದುರಿನಲ್ಲಿ ಕಳೆದ ಐವತ್ತು ವರ್ಷಗಳಿಂದ ದೀಪಕ್ ಓನಮ್ ಶೆಟ್ಟಿ ನಡೆಸುತ್ತಿರುವ ಹೋಟೆಲ್ ಮೇಲೆ ನಿನ್ನೆ ಬೆಳಗ್ಗೆ 11 ಗಂಟೆಗೆ ಆಹಾರ ಸುರಕ್ಷತಾ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ದಾಳಿ ನಡೆಸಿತು.
ಹೋಟೆಲ್ ಪಕ್ಕದಲ್ಲೇ ಶಾಲೆ ಇರುವುದರಿಂದ ಸಾರ್ವಜನಿಕರಿಂದ ಅನೈರ್ಮಲ್ಯದ ಬಗ್ಗೆ ಬಂದಿದ್ದ ಮೌಖಿಕ ದೂರು ಹಿನ್ನೆಲೆಯಲ್ಲಿ ದಾಳಿ ನಡೆಯಿತು. ಪರಿಶೀಲನೆ ವೇಳೆ ಹೋಟೆಲ್ ಒಳಗೆ ಕಂಡ ದೃಶ್ಯ ಅಧಿಕಾರಿಗಳ ತಲೆತಿರುಗುವಂತಾಗಿತ್ತು. ಕೊಳೆತು ನಾರಿದ ಬಾಳೆಹಣ್ಣುಗಳು, ದುರ್ವಾಸನೆ ಬೀರುತ್ತಿದ್ದ ಪಾತ್ರೆಗಳು, ಇಲಿ ಕಚ್ಚಿದ ಕಡಲೆಹಿಟ್ಟು ಸೇರಿದಂತೆ ಅತ್ಯಂತ ಗಂಭೀರವಾದ ಅಂಶವಾಗಿ “ಕ್ರೂಡ್ ಆಯಿಲ್” ರೂಪದಲ್ಲಿ ದ್ರವ್ಯ ಕಂಡುಬಂದಿದ್ದು, ಅದು ಸಾಮಾನ್ಯ ಅಡುಗೆ ಎಣ್ಣೆಯಂತಿರದೆ ವಿಷಕಾರಿ ಗುಣ ಹೊಂದಿತ್ತು. ಈ ದ್ರವ್ಯವನ್ನು ಎರಡು ಪಾತ್ರೆಗಳಲ್ಲಿ ಸಂಗ್ರಹಿಸಲಾಗಿದ್ದು, ಅದನ್ನು ಮರು-ಮರು ಸುಟ್ಟು ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂತಹ ವಿಷಕಾರಿ ದ್ರವ್ಯವನ್ನು ಬಜ್ಜಿ–ಬೋಂಡ ಮಾಡಲು ಬಳಸುವುದರಿಂದ ಮಾನವನ ದೇಹದಲ್ಲಿ ನೇರವಾಗಿ ವಿಷಕಾರಿ ಅಂಶಗಳು ಸೇರುವ ಅಪಾಯವಿದ್ದು, ಹೃದಯಾಘಾತ, ಕ್ಯಾನ್ಸರ್ ಸೇರಿ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಗಳಿಗೆ ಕಾರಣವಾಗಬಹುದು ಎಂಬುದಾಗಿ ಆರೋಗ್ಯ ಇಲಾಖೆ ಎಚ್ಚರಿಸಿದೆ.
ಹೋಟೆಲ್ ಒಳಗಡೆ ಎಣ್ಣೆ ಡಬ್ಬಗಳು ಚೆಲ್ಲಾಪಿಲ್ಲಿಯಾಗಿದ್ದವು. ಕೆಲವು ಔಷಧಿ–ಟಾನಿಕ್ ಬಾಟಲಿಗಳು, ಇಲಿ–ಹೆಗ್ಗಣಗಳ ಓಡಾಟ ಸಹಜ ದೃಶ್ಯವಾಗಿತ್ತು. ಶಾಲೆಯ ಮಕ್ಕಳು ಸಹ ಇಂಥ ತಿಂಡಿಗಳನ್ನು ಸೇವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸವಾಲು ತಲೆದೋರಿದೆ.

ಅಷ್ಟೇ ಅಲ್ಲದೆ, ಶಾಲೆಯ 100 ಮೀಟರ್ ಅಂತರದಲ್ಲಿ ತಂಬಾಕು–ಸಿಗರೇಟ್ ಮಾರಾಟ ನಿಷೇಧಿಸಿರುವ ನಿಯಮಗಳಿದ್ದರೂ, ಈ ಹೋಟೆಲ್‌ನಲ್ಲಿ ಕೇವಲ 20 ಮೀಟರ್ ಅಂತರದಲ್ಲೇ ಬಿಡಿ, ಸಿಗರೇಟ್, ಗುಟ್ಕಾ ಹಾಗೂ ತಂಬಾಕು ಮಾರಾಟ ನಡೆಯುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದು ಕಾನೂನಿನ ಗಂಭೀರ ಉಲ್ಲಂಘನೆಯಾಗಿದ್ದು, ವಿದ್ಯಾರ್ಥಿಗಳ ಆರೋಗ್ಯಕ್ಕೆ ನೇರ ಅಪಾಯವನ್ನು ಉಂಟುಮಾಡುತ್ತದೆ.
ಇದೊಂದರೊಂದಿಗೆ, ಅಂಕೋಲಾ ಪುರಸಭೆ ವ್ಯಾಪ್ತಿಯಲ್ಲಿ ಹೋಟೆಲ್, ಬೇಕರಿ, ಫಾಸ್ಟ್‌ಫುಡ್ ಸೆಂಟರ್‌ಗಳನ್ನು ನಡೆಸುವ ಉದ್ಯಮಿಗಳು ಸರಿಯಾದ ವ್ಯಾಪಾರ ಪರವಾನಿಗೆ ಪಡೆದಿರಬಹುದೇ? ಆರೋಗ್ಯ ಸುರಕ್ಷತಾ ನಿಯಮಾವಳಿ ಪಾಲನೆ ಮಾಡುತ್ತಿದಾರೆಯೇ? ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಪುರಸಭೆಯ ಆರೋಗ್ಯ ನಿರೀಕ್ಷಕ ಅಧಿಕಾರಿಗಳೂ ಕೂಡ ಜವಾಬ್ದಾರರಾಗಿದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ತಕ್ಷಣದ ಪರಿಶೀಲನೆ ನಡೆಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
“ಇಂತಹ ಅನೈರ್ಮಲ್ಯದ ಹೋಟೆಲ್‌ಗಳನ್ನು ಮುಂದುವರಿಸಲು ಅವಕಾಶ ನೀಡಲಾಗುವುದಿಲ್ಲ. ಸಾರ್ವಜನಿಕರ ಜೀವಕ್ಕೆ ಆಟವಾಡುವ ಹೋಟೆಲ್ಗಳು, ಬೇಕರಿ, ಫಾಸ್ಟ್ ಫುಡ್ ಸೆಂಟರ್ಗಳ ಮೇಲೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು” ಎಂದು ಆಹಾರ ಸುರಕ್ಷತಾ ಅಧಿಕಾರಿ ಡಾ. ಜಗದೀಶ್ ಡಿ. ನಾಯ್ಕ ಸ್ಪಷ್ಟಪಡಿಸಿದರು.
ಈ ದಾಳಿಯಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಶೈಲಜಾ ಭಂಡಾರಿ, ಆರೋಗ್ಯ ನಿರೀಕ್ಷಣಾಧಿಕಾರಿ ಕು. ದರ್ಶನ ನಾಯ್ಕ, ತಾಲೂಕು ಎಪಿಡೆಮಾಲಜಿಸ್ಟ್ ಅಕ್ಷಯಕುಮಾರ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ ಕೆ. ನಾಯ್ಕ ಹಾಗೂ ಟಿಬಿ ಸೂಪರ್ವೈಸರ್ ಸಂದೀಪ್ ಪಡ್ತಿ ಉಪಸ್ಥಿತರಿದ್ದರು.

ಸಾರ್ವಜನಿಕರ ಆಗ್ರಹವೇನೆಂದರೆ – “ಅಂಕೋಲಾದಲ್ಲಿ ದೀಪಕ್ ಶೆಟ್ಟಿ ಅಂತೆಯೇ ಅನೈರ್ಮಲ್ಯ ವಾತಾವರಣದಲ್ಲಿ ಆಹಾರ ಸುರಕ್ಷಿತ ನಿಯಮಗಳನ್ನು ಉಲ್ಲಂಘಿಸಿ ಬಾಯಿ ಚಪ್ಪರಿಸುವ ಸಿಹಿ ತಿಂಡಿಗಳನ್ನು ತಯಾರಿಸುವವರು ಅನೇಕರು ಇದ್ದಾರೆ. ಎಲ್ಲರನ್ನೂ ಪರಿಶೀಲನೆಗೆ ಒಳಪಡಿಸಬೇಕು. ಸಾರ್ವಜನಿಕರ ಜೀವದೊಂದಿಗೆ ಚೌಕಾಸಿ ನಡೆಸುವ ಇಂತಹ ಹೋಟೆಲ್‌ಗಳನ್ನು ಗುರುತು ಮಾಡಿ ಕಾನೂನು ಕ್ರಮ ಜರುಗಿಸಬೇಕು” ಎಂಬುದು.
ಈ ಘಟನೆ ಅಂಕೋಲಾದ ನಾಗರಿಕರಿಗೆ ಮಾತ್ರವಲ್ಲದೆ, ಜಿಲ್ಲೆಯ ಎಲ್ಲರಿಗೂ ಎಚ್ಚರಿಕೆ ಗಂಟೆಯಾಗಿದೆ. “ಮನೆಯಲ್ಲಿ ಶುದ್ಧ, ರುಚಿಕರ ಆಹಾರ ಸೇವಿಸುವುದೇ ಸುರಕ್ಷತೆ” ಎಂದು ಹಿರಿಯರು ಹೇಳುತ್ತಿದ್ದ ಮಾತು ಇಂತಹ ಘಟನೆಗಳಿಂದ ಮತ್ತೆ ಸತ್ಯವಾಗಿದೆ..
ವರದಿ: ಕಿರಣ ಚಂದ್ರಹಾಸ ಗಾಂವಕರ

