ಅಂಕೋಲಾ : ತಾಲೂಕಿನ ಪಶು ವೈದ್ಯಕೀಯ ಇಲಾಖೆಯಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿ ಯಾಗಿ ಸೇವೆ ಸಲ್ಲಿಸಿ ಅದೆಷ್ಟೋ ಮೂಕ ಪ್ರಾಣಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಈಗ ನಿವೃತ್ತ ಜೀವನಕ್ಕೆ ಕಾಲಿಡುತ್ತಿರುವ ಶ್ರೀ ಎಂ.ಎಂ ಹೆಗಡೆ ಅವರಿಗೆ ಇಲಾಖೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ದಿನಾಂಕ 30-8-2025 ರಂದು ಅಂಕೋಲಾದ ಪಶು ವೈದ್ಯಕೀಯ ಇಲಾಖೆಯಲ್ಲಿ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಕರ್ನಾಟಕ ರಣಧೀರರ ವೇದಿಕೆಯ ಪದಾಧಿಕಾರಿಗಳಿಂದ ಸೇವಾ ದಿನಗಳಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಶ್ರೀ ಎಂ . ಎಂ ಹೆಗಡೆಯವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಔಷಧಿಗಳ ವಿಚಾರದಲ್ಲಿ ಎಂ. ಎಂ ಹೆಗಡೆಯವರ ಜ್ಞಾನ ಭಂಡಾರ ನಿಜಕ್ಕೂ ಮೆಚ್ಚುವಂತದ್ದು. ಕಾರ್ಯಕ್ರಮವನ್ನು ನೂತನವಾಗಿ ಬಂದಂತಹ ಮುಖ್ಯ ಪಶುವೈದ್ಯಾಧಿಕಾರಿ ಅಭಿಷೇಕ್ ರವರು ಸ್ವಾಗತಿಸುವ ಮೂಲಕ ಪ್ರಾರಂಭಿಸಿದರು.

ಪ್ರಾಥಮಿಕವಾಗಿ ಎಸ್.ಎಸ್ ಹೆಗಡೆಯವರು, ಎಂ.ಎಂ. ಹೆಗಡೆಯವರ ಬಗ್ಗೆ ಕಿರು ಪರಿಚಯವನ್ನು ನೀಡುವುದರ ಮೂಲಕ ಅವರು ಪ್ರಾರಂಭಿಕ ದಿನಗಳಿಂದ ಇಲ್ಲಿಯವರೆಗೂ ಸೇವೆಸಲ್ಲಿದ ಬಗ್ಗೆ ಸವಿವರವಾಗಿ ತಿಳಿಸಿದರು. ಅಷ್ಟೇ ಅಲ್ಲದೇ ಎಂ. ಎಂ ಹೆಗಡೆಯವರು ಕಡು ಬಡತನದಿಂದ ಬಂದವರು,ಬಾಳೆಗೊನೆ ಮಾರಿ ಬಂದಂತಹ ಹಣದಿಂದ ಜೀವನ ನಡೆಸಿ ಕೆಲಸ ಮಾಡುತ್ತಿದ್ದವರು, ಆದರೂ ಸಹ ಬಡತನ ಅವರ ಸಾಧನೆಗೆ ದಕ್ಕೆ ತರದೆ ಇಂದು ಸುಧೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದುತ್ತಿದ್ದಾರೆ ಎಂದು ತಿಳಿಸಿದರು.
ಎಂ. ಎಂ ಹೆಗಡೆಯವರ ಆಪ್ತರು ಹಾಗೂ ಅವರ ಜೊತೆ ಒಡನಾಡಿದ ಅಧಿಕಾರಿಗಳು ತಮ್ಮ ತಮ್ಮ ಸ್ಮರಣೀಯ ದಿನಗಳನ್ನು ನೆನೆದು ನಿವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಎಂ. ಎಂ ಹೆಗಡೆಯವರಿಗೆ ದೇವರು ಒಳ್ಳೆಯ ಆರೋಗ್ಯವನ್ನು ನೀಡಲಿ, ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಣಧೀರರ ವೇದಿಕೆಯ ಮಹಿಳಾ ಜಿಲ್ಲಾಧ್ಯಕ್ಷರು ಮಾತನಾಡಿ, “ದನ, ಎಮ್ಮೆ, ಕುರಿ, ಕೋಳಿ, ಟಗರು, ಮುಂತಾದ ಉತ್ಪಾದಕ ಪ್ರಾಣಿಗಳಷ್ಟೇ (ಹೈನುಗಾರಿಕೆ ಪ್ರಾಣಿ) ಅಲ್ಲದೇ ನಾಯಿ, ಬೆಕ್ಕು, ಮೊಲ ಇತರೆ ಸಣ್ಣ ಪ್ರಾಣಿಗಳಿಗೂ ಸಹ ಅಷ್ಟೇ ಕಾಳಜಿಯಿಂದ ಚಿಕಿತ್ಸೆಕೊಡುವಲ್ಲಿ ಎಂ. ಎಂ ಹೆಗಡೆಯವರು ಯಾವತ್ತೂ ಮುಂದು. ಸದಾ ಕಾರ್ಯ ಶೀಲತೆಯಿಂದಿರುವ ಎಂ. ಎಂ ಹೆಗಡೆ ಯವರು ಕಚೇರಿಯ ಸಮಯದಲ್ಲಿ ಅಷ್ಟೇ ಅಲ್ಲದೇ ಯವುದೇ ಸಮಯದಲ್ಲಿ ಕರೆ ಮಾಡಿದರೂ ಸಹ ಮೂಕ ಪ್ರಾಣಿಗಳ ಚಿಕಿತ್ಸೆಗೆ ಬೇಕಾದ ಆರೋಗ್ಯ ಸಲಹೆಗಳನ್ನು ನೀಡುತ್ತಿದ್ದರು. ಇಂತಹ ನಿಸ್ವಾರ್ಥ ಅಧಿಕಾರಿಗಳು ನಿವೃತ್ತಿ ಜೀವನಕ್ಕೆ ಕಾಲಿಡುತ್ತಿದ್ದಾರೆ, ದೇವರು ಅವರಿಗೆ ಒಳ್ಳೆಯ ಆರೋಗ್ಯವನ್ನು ನೀಡಲಿ ಎಂದು ಶುಭಕೋರಿದರು.
ಕರ್ನಾಟಕ ರಣಧೀರರ ವೇದಿಕೆಯ ಸದಸ್ಯರಾದ ಮಹೇಶ್ ಗೌಡರವರು ಸಹ ಮಾತನಾಡಿ ಎಂ. ಎಂ ಹೆಗಡೆಯವರ ನಿವೃತ್ತಿ ಜೀವನಕ್ಕೆ ಶುಭಕೋರಿದರು.
ತದನಂತರ ಶ್ರೀ ಎಂ. ಎಂ ಹೆಗಡೆಯವರಿಗೆ ಇಲಾಖೆಯ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಷ್ಟೇ ಅಲ್ಲದೇ ನಿಸ್ವಾರ್ಥ ಸೇವೆಯಿಂದ ಪಶು ವೈದ್ಯಕೀಯ ಇಲಾಖೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಶ್ರೀಯುತ ಎಂ. ಎಂ ಹೆಗಡೆಯವರಿಗೆ ಕರ್ನಾಟಕ ರಣಧೀರರ ವೇದಿಕೆಯ ವತಿಯಿಂದ ಜಿಲ್ಲಾಧ್ಯಕ್ಷರು ಶ್ರೀ ಸೂರಜ್ ಪಾಂಡುರಂಗ ನಾಯ್ಕ ರವರು ಸನ್ಮಾನಿಸಿ ಗೌರವವನ್ನು ಸಲ್ಲಿಸಿದರು.
ಸನ್ಮಾನ ಕಾರ್ಯಕ್ರಮದ ನಂತರ ಎಂ. ಎಂ ಹೆಗಡೆಯವರು ನಡೆದುಕೊಂಡು ಬಂದಂತಹ ದಿನಗಳು, ಸೇವೆಗಳು ಹಾಗೂ ಒತ್ತಡಗಳ ನಡುವೆ ಮಾಡಿದ ಕೆಲಸದ ದಿನಗಳನ್ನೆಲ್ಲ ನೆನೆದು ಭಾವುಕರಾದರು. “ರೈತರ ಜೊತೆ ನನಗೆ ಒಳ್ಳೆ ಬಾಂಧವ್ಯ ಇತ್ತು, ರೈತರ ಆಶೀರ್ವಾದವೇ ನಮ್ಮ ಕುಟುಂಬದ ಮೇಲೆ ಇದೆ, ರೈತರಿಗೆ ಒಳ್ಳೆ ಸೇವೆಯನ್ನು ಕೊಟ್ಟಾಗ ಮಾತ್ರ ಸರ್ಕಾರ ನಮಗೆ ಕೊಟ್ಟ ಋಣದಿಂದ ನಾವು ಮುಕ್ತ ಎಂದು ಹೇಳಬಹುದು ಎಂದು ಹೇಳುತ್ತ, ನನಗೆ ನಾನು ಮಾಡಿದ ನಿಸ್ವಾರ್ಥ ಸೇವೆಯಿಂದ ತೃಪ್ತಿಯಿದೆ ಎಂದರು.”
ಎಸ್.ಎಸ್ ಹೆಗಡೆ ಹಾಗೂ ನಾನು “ಕೃಷ್ಣ ಮತ್ತು ಸುಧಾಮ” ರೆಂದೇ ಸಂಭೋದಿಸಲ್ಪಡುತ್ತಿದ್ದೆವು. ಇಂತಹ ಅಂತರಂಗ ಮಿತ್ರರನ್ನು ಈ ಸೇವೆಯಲ್ಲಿ ಪಡೆದಿದ್ದಕ್ಕೆ ತಾನು ಧನ್ಯ ಎಂದರು. ಶ್ರೀನಿವಾಸ ಪಾಟೀಲ್ ರವರು ನಾನು ಹುದ್ದೆಯಲ್ಲಿ ದೊಡ್ಡವರಾದರು ಸಹ ನೀವು ವಯಸ್ಸಿನಲ್ಲಿ ಹಿರಿಯರು ಎಂದು ನನ್ನನ್ನು “ಸರ್” ಎಂದು ಸಂಬೋಧಿಸುತ್ತಿದ್ದರು ಎಂದು ಅವರ ಅನುಪಸ್ಥಿತಿಯಲ್ಲಿ ಅವರನ್ನು ನೆನೆದರು.

ತಮ್ಮ ಎಲ್ಲ ಹಳೆಯ ಮಿತ್ರರು, ಗುರುಗಳನ್ನು ನೆನೆಯುತ್ತಾ ಅವರವರ ಜೊತೆ ಕೂಡಿದ ನೆನಪುಗಳನ್ನು ಮೆಲಕು ಹಾಕುತ್ತಾ, ಹೆತ್ತವರಿಗೆ ಹಾಗೂ ತನ್ನೆಲ್ಲಾ ಕಷ್ಟ ಸುಖಗಳಲ್ಲಿ ಆಧಾರವಾಗಿ ನಿಂತಹ ಮಡದಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಕೊನೆಯಲ್ಲಿ ಎಂ. ಎಂ ಹೆಗಡೆಯವರ ಧರ್ಮ ಪತ್ನಿ ಶ್ರೀಮತಿ ಲಕ್ಷ್ಮೀ ಹೆಗಡೆ ಯವರು ಮಾತನಾಡಿ, ಎಂ. ಎಂ ಹೆಗಡೆಯವರು ವೃತ್ತಿ ಯನ್ನು ಅಂಗಿಯ ತರ ಅಲ್ಲದೇ, ಚರ್ಮದ ತರ ಅಳವಡಿಸಿ ಕೊಂಡು ನಿಷ್ಠೆಯಿಂದ ಕೆಲಸವನ್ನು ಮಾಡುತ್ತಿದ್ದರು ಎಂದು ಅವರ ಕಾರ್ಯ ಪ್ರವೃತ್ತಿಯನ್ನು ಹೇಳಿದರು. ಕಾರ್ಯಕ್ರಮಕ್ಕೆ ಬಂದಂತಹ ಸರ್ವರಿಗೂ ನೂತನವಾಗಿ ಬಂದಂತಹ ಮುಖ್ಯ ಪಶು ವೈದ್ಯಾಧಿಕಾರಿ ಅಭಿಷೇಕ್ ರವರು ವಂದಿಸುತ್ತಾ ಕಾರ್ಯಕ್ರಮ ಮುಕ್ತಾಯಗೊಳಿಸಿದರು.
ಈ ಕಾರ್ಯಕ್ರಮದಲ್ಲಿ, ಕರ್ನಾಟಕ ರಣಧೀರರ ವೇದಿಕೆ ಉತ್ತರಕನ್ನಡ ಜಿಲ್ಲಾ ಅಧ್ಯಕ್ಷರಾದ ಸೂರಜ್ ಪಂಡುರಂಗ ನಾಯ್ಕ, ಮಹಿಳಾ ಘಟಕ ಅಧ್ಯಕ್ಷರಾದ ಕುಮಾರಿ ಸುಪ್ರಿಯಾ ವಿಷ್ಣು ನಾಯ್ಕ, ಉಪಾಧ್ಯಕ್ಷರಾದ ಕಿರಣ ಚಂದ್ರಹಾಸ ಗಾಂವ್ಕರ್, ಸದಸ್ಯರಾದ ಕುಮಾರಿ ಐಶ್ವರ್ಯ ನಾಯ್ಕ, ಮಹೇಶ ಗೌಡ, ರಘುನಾಥ ನಾಯ್ಕ, ದಿಲೀಪ ನಾಯ್ಕ, ಸುಭಾಷ ನಾಯ್ಕ, ವಿವೇಕ ಐಗಳ, ಪತ್ರಕರ್ತರಾದ ವಿಲಾಸ ನಾಯಕ, ಎಂ. ಎಂ. ಹೆಗಡೆಯವರ ಆಪ್ತರು, ಅಧಿಕಾರಿ ವೃಂದ, ಹಾಗೂ ಇಲಾಖೆಯ ಸಿಬ್ಬಂದಿಗಳಾದ ಶ್ಯಾಮ, ಮುಂತಾದವರು ಹಾಜರಿದ್ದರು.
ವರದಿ: ಸುಪ್ರಿಯಾ ವಿಷ್ಣು ನಾಯ್ಕ

