ಕೇಣಿ ಆಳ ಸಮುದ್ರ ವಾಣಿಜ್ಯ ಬಂದರು ಯೋಜನೆ ಕೈಬಿಡಬೇಕು – ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಮಂಜಗುಣಿ ರವರ ಆಗ್ರಹ..

News Desk
1 Min Read

ಅಂಕೋಲಾ: ಅಂಕೋಲಾ ತಾಲೂಕಿನ ಕೇಣಿ ಗ್ರಾಮದಲ್ಲಿ ಪ್ರಸ್ತಾಪವಾಗಿರುವ ಸರ್ವ ಋತು ಆಳ ಸಮುದ್ರ ಗ್ರೀನ್‌ಫೀಲ್ಡ್ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯ ವಿರುದ್ಧ ಸ್ಥಳೀಯ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ (ರಿ), ಮಂಜಗುಣಿ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಲಾಗಿದೆ.

ಸಂಘದ ಪ್ರಕಾರ, ಬಂದರು ನಿರ್ಮಾಣದಿಂದ ಕರಾವಳಿ ತೀರದ ಸಾವಿರಾರು ಮೀನುಗಾರರ ಬದುಕು ಹಾಳಾಗುವ ಆತಂಕವಿದೆ. ವಿಶೇಷವಾಗಿ ಮಳೆಗಾಲದಲ್ಲಿ ಮೀನುಗಾರಿಕೆಗೆ ಅನುಕೂಲವಾಗುವ ತೀರ ಪ್ರದೇಶವನ್ನೇ ಬಂದರು ಆವರಿಸಿಕೊಳ್ಳಲಿದ್ದು, “ಈ ಯೋಜನೆ ಕೇವಲ ಕೇಣಿ ಮೀನುಗಾರರಷ್ಟೇ ಅಲ್ಲ, ಉತ್ತರ ಕನ್ನಡದ ಸಂಪೂರ್ಣ ಕರಾವಳಿ ಮೀನುಗಾರರ ಜೀವನೋಪಾಯವನ್ನು ನಾಶಮಾಡುವಂತಿದೆ” ಎಂದು ಸಂಘದ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.

ಬಂದರು ರಕ್ಷಣೆಗೆ ಸುಮಾರು 3.5 ಕಿಲೋಮೀಟರ್ ಉದ್ದದ ತಡೆಗೋಡೆ ನಿರ್ಮಿಸಲಾಗುವುದು ಎಂಬ ಸುದ್ದಿ ಕೂಡ ಆತಂಕ ಉಂಟುಮಾಡಿದೆ. ಕಾರವಾರ, ಮುದಗಾ, ಬೆಲೆಕೇರಿ, ತದಡಿ, ಹೊನ್ನಾವರ ಮುಂತಾದ ಕಡೆಗಳಲ್ಲಿ ಈಗಾಗಲೇ ಮೀನುಗಾರಿಕೆಗೆ ಅನುಕೂಲಕರವಾದ ಬಂದರುಗಳಿರುವ ಹಿನ್ನೆಲೆಯಲ್ಲಿ ಇನ್ನೊಂದು ಹೊಸ ಬಂದರಿನ ಅವಶ್ಯಕತೆ ಇಲ್ಲ ಎಂದು ಮೀನುಗಾರರು ಸ್ಪಷ್ಟಪಡಿಸಿದ್ದಾರೆ.

“ಸಾವಿರಾರು ಬಡ ಮೀನುಗಾರ ಕುಟುಂಬಗಳ ಬದುಕನ್ನು ರಕ್ಷಿಸಲು ಕೇಣಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆ ತಕ್ಷಣ ಕೈಬಿಡಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಕೆಯಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ ವಿಠ್ಠಲ್ ತಾಂಡೆಲ್, ಕಾರ್ಯದರ್ಶಿ ಅಕ್ಷಯ್ ತುಕಾರಾಂ ತಾಂಡೆಲ್, ಸಹ ಕಾರ್ಯದರ್ಶಿ ರಾಜು ದತ್ತಾ ತಾಂಡೆಲ್, ಸದಸ್ಯರು ಸುದರ್ಶನ ನೇಮಾ ತಾಂಡೆಲ್, ಸಂತೋಷ ಗೋಪಾಲ ತಾಂಡೆಲ್ ಹಾಗೂ ದೀಪಕ ದಾಮೋದರ ತಾಂಡೆಲ್ ಉಪಸ್ಥಿತರಿದ್ದರು.

Share This Article