ಅಂಕೋಲಾ: (ಅಗಸ್ಟ್21) ಕೇಣಿ ಗ್ರಾಮದಲ್ಲಿ ಪ್ರಸ್ತಾಪವಾಗಿರುವ ವಾಣಿಜ್ಯ ಬಂದರು ನಿರ್ಮಾಣದಿಂದ ಸ್ಥಳೀಯರ ಬದುಕು ಹಾಳಾಗುವ ಭೀತಿ ವ್ಯಕ್ತವಾಗಿದ್ದು, ಬಡಗೇರಿ ಊರಿನ ನಾಗರಿಕರು ಇಂದು ಅಂಕೋಲಾದ ತಹಸೀಲ್ದಾರರ ಡಾ. ಚಿಕ್ಕಪ್ಪ ನಾಯಕ ರವರ ಗಮನಕ್ಕೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಬಡಗೇರಿ ಪ್ರದೇಶದಲ್ಲಿ ಹೆಚ್ಚಿನವರು ಹಾಲಕ್ಕಿ ಒಕ್ಕಲು ಸಮಾಜದವರಾಗಿದ್ದು, ಅವರ ಜೊತೆಗೆ ಕೋಮರಪಂಥ, ಶೆಟ್ಟಿ, ನಾಪಿಕ ಮುಂತಾದ ಸಮಾಜದ ಬಾಂಧವರು ವಾಸಿಸುತ್ತಿದ್ದಾರೆ. ಹಾಲಕ್ಕಿ ಸಮಾಜದವರು ಈಗಾಗಲೇ ನೌಕಾನೆಲೆ, ಕೊಂಕಣ ರೈಲ್ವೆ ಹಾಗೂ ವಿಮಾನ ನಿಲ್ದಾಣ ಮುಂತಾದ ಸರ್ಕಾರಿ ಯೋಜನೆಗಳಿಗೆ ತಮ್ಮ ಭೂಮಿ ಬಿಟ್ಟುಕೊಟ್ಟು ಉದ್ಯೋಗವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕೆಲವು ಕುಟುಂಬಗಳು ಸಮುದ್ರದ ಅಂಚಿನಲ್ಲಿರುವ ಕೋಟೆ. ಬೆಟ್ಟ ಹಾಗೂ ದಂಡೆ ಗಳಲ್ಲಿನ ಗಿಡಮೂಲಿಕೆಗಳನ್ನು ಆಧಾರವಿಟ್ಟು ಔಷಧೋಪಚಾರದಲ್ಲಿ ತೊಡಗಿದ್ದರೆ, ಇನ್ನುಳಿದ ಅಲ್ಪಸ್ವಲ್ಪ ಜಮೀನುಗಳು ಬಂದರು ನಿರ್ಮಾಣ ಪ್ರದೇಶದ ಅಂಚಿನಲ್ಲಿವೆ. ಬಂದರು ನಿರ್ಮಾಣಗೊಂಡರೆ ಕೃಷಿ ಕೂಲಿ, ಗಿಡಮೂಲಿಕೆಗಳ ಸಂಗ್ರಹ ಹಾಗೂ ಪರಂಪರಾಗತ ಉದ್ಯೋಗಗಳು ನಾಶವಾಗಿ ಸಮಾಜದವರು ನಿರಾಶ್ರಿತರಾಗುವ ಪರಿಸ್ಥಿತಿ ಎದುರಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

“ಬಂದರು ನಿರ್ಮಾಣದಿಂದ ನಮ್ಮ ಬದುಕು ಕತ್ತಲೆಯಲ್ಲೇ ಮುಳುಗಲಿದೆ. ಹೀಗಾಗಿ ಬಂದರು ನಿರ್ಮಾಣ ಬೇಡವೇ ಬೇಡ” ಎಂಬ ಅಭಿಪ್ರಾಯಕ್ಕೆ ಗ್ರಾಮಸ್ಥರು ಬಂದಿದ್ದು, ಇದರ ವಿರುದ್ಧ ತಮ್ಮ ನಿಲುವನ್ನು ಲಿಖಿತವಾಗಿ ತಹಸೀಲ್ದಾರರಿಗೆ ಸಲ್ಲಿಸಿದ್ದಾರೆ.ಮನವಿಯನ್ನು ಜಿಲ್ಲಾಧಿಕಾರಿಗಳಿಗೂ ತಲುಪಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಪಾಂಡುರಂಗ ಪಿ ಗೌಡ. ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಬಾವಿಕೇರಿ. ನಾಗರಾಜ್ ಗೌಡ. ಆನಂದೂ ಹಾಲಪ್ಪ ಗೌಡ. ನಾಗಪ್ಪ ಗೌಡ.. ಮಹೇಶ್ ಗೌಡ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಮನವಿ ನೀಡುವ ಸಂದರ್ಭದಲ್ಲಿ ಹಾಜರಿದ್ದರು.
ವರದಿ: ಕಿರಣ ಚಂದ್ರಹಾಸ ಗಾಂವಕರ

