ಚಿಕ್ಕ ವಯಸ್ಸು, ದೊಡ್ಡ ಸಾಧನೆ ! ಅಂಕೋಲಾದ ಹ್ರಿಧಿ ನಾಯಕ ವಿಯೆಟ್ನಾಂನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾಳೆ !

News Desk
1 Min Read

ಅಂಕೋಲಾ, ಆಗಸ್ಟ್ 1: ಅಂಕೋಲಾ ಮೂಲದ ಕೇವಲ 7 ವರ್ಷದ ಹ್ರಿಧಿ ನಾಯಕ ಅವರು ತಮ್ಮ ಕಲಾತ್ಮಕ ಪ್ರತಿಭೆಯಿಂದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಗರ್ವದ ಕ್ಷಣವಾಗಿದೆ. ಬೆಂಗಳೂರಿನಲ್ಲಿ ವಾಸಿಸುವ ಪ್ರಶಾಂತ ನಾಯಕರ ಮತ್ತು ಸಿಂಚನಾ ಇವರ ಮಗಳು ಹ್ರಿಧಿ, 2ನೇ ತರಗತಿಯ ವಿದ್ಯಾರ್ಥಿನಿ ಯಾಗಿದ್ದು, ಕಳೆದ 2 ವರ್ಷಗಳಿಂದ ಖ್ಯಾತ ಕೋರಿಯೋಗ್ರಾಫರ್ ಅತುಲ್ ಸುರೇಶ್ ಅವರ ‘ಅಥುಲ್ಸ್ ಅಕಾಡಮಿ’ಯಲ್ಲಿ ಮಾಡೆಲಿಂಗ್ ಮತ್ತು ನೃತ್ಯ ತರಬೇತಿ ಪಡೆದುಕೊಂಡಿದ್ದಾರೆ.

ಮಂಗಳೂರುನಲ್ಲಿ ನಡೆದ Junior Model International (JMI) ಆಡಿಷನ್‌ನಲ್ಲಿ ಆಯ್ಕೆಯಾಗಿ, ಮೇ ತಿಂಗಳಲ್ಲಿ ಗೋವಾದಲ್ಲಿ ನಡೆದ ಇಂಡಿಯಾ ಫಿನಾಲೆ ಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಹ್ರಿಧಿ, ಇದೀಗ ಆಗಸ್ಟ್ 13ರಿಂದ 17ರವರೆಗೆ ವಿಯೆಟ್ನಾಂನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ಗೋವಾ ಸ್ಪರ್ಧೆಯಲ್ಲಿ ಹ್ರಿಧಿಯು ಧರಿಸಿದ್ದ ಕರಾವಳಿ ಯಕ್ಷಗಾನ ಶೈಲಿಯ ಉಡುಪು ಮತ್ತು ಕರ್ನಾಟಕದ ಪರಂಪರೆ, ಪ್ರವಾಸೋದ್ಯಮ ಸ್ಥಳಗಳನ್ನು ಒಳಗೊಂಡ ಟ್ಯಾಬ್ಲೋ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು.

ಅಂಕೋಲಾದ ಈ ಪುಟಾಣಿ ಕಲಾತ್ಮಕತೆಯ ಹಿರಿಮೆ ದೇಶದ ಹೆಮ್ಮೆಗೆ ಕಾರಣವಾಗಿದ್ದು, ಮುಂದಿನ ಹಂತಗಳಿಗೂ ಅಂಕೋಲಾದ ಪುಟಾಣಿ ಹ್ರಿಧಿ ನಾಯಕಗೆ ಹೃದಯಪೂರ್ವಕ ಶುಭಾಶಯಗಳು.

Share This Article