2026ರ ಜನವರಿ 1ರೊಳಗೆ ನಿವೃತ್ತರಾಗುವ ನೌಕರರ ಪಿಂಚಣಿ ಸೌಲಭ್ಯ ಕಡಿತಗೊಳಿಸಬಾರದು – ಅಂಕೋಲಾ ನಿವೃತ್ತ ನೌಕರರ ಸಂಘದ ಮನವಿ

News Desk
1 Min Read

ಅಂಕೋಲಾ, ಜುಲೈ 28:ಕೇಂದ್ರ ಸರ್ಕಾರವು 8ನೇ ವೇತನ ಆಯೋಗವನ್ನು ರಚಿಸಿರುವ ಹಿನ್ನೆಲೆಯಲ್ಲಿ, 2025ರ ಮಾರ್ಚ್ 25ರಂದು ಲೋಕಸಭೆಯಲ್ಲಿ ಮಂಡಿಸಿದ ಆರ್ಥಿಕ ಬಿಲ್‌ನಲ್ಲಿ, 2026ರ ಜನವರಿ 1ರೊಳಗೆ ನಿವೃತ್ತರಾಗುವ ನೌಕರರಿಗೆ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ತುಟ್ಟಿ ಭತ್ಯೆ ಪರಿಷ್ಕರಣೆ ನೀಡಲು ಸಾಧ್ಯವಿಲ್ಲ ಎಂಬ ಸೂಚನೆ ನೀಡಲಾಗಿದೆ. ಈ ನಿರ್ಧಾರವು ಲಕ್ಷಾಂತರ ನಿವೃತ್ತ ನೌಕರರ ಆರ್ಥಿಕ ಸ್ಥಿತಿಗೆ ಧಕ್ಕೆಯುಂಟುಮಾಡುವ ಸಾಧ್ಯತೆ ಇದೆ ಎಂಬ ಆತಂಕವನ್ನು ಉಂಟುಮಾಡಿದೆ.

ಈ ನಿರ್ಧಾರವನ್ನು ತಕ್ಷಣವೇ ಹಿಂತೆಗೆದು ಕೊಳ್ಳಬೇಕೆಂಬ ಆಗ್ರಹದೊಂದಿಗೆ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ (ರಿ), ಅಂಕೋಲಾ ತಾಲೂಕ ಶಾಖೆ ವತಿಯಿಂದ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮನವಿಯೊಂದನ್ನು ಸಲ್ಲಿಸಲಾಯಿತು. ಈ ಮನವಿ ಅಂಕೋಲಾ ತಾಲೂಕು ದಂಡಾಧಿಕಾರಿ ಡಾ. ಚಿಕ್ಕಪ್ಪ ನಾಯಕ ಅವರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಕಳುಹಿಸಲಾಗುತ್ತದೆ. ಅವರು ಮನವಿಯನ್ನು ಅಧಿಕೃತವಾಗಿ ಸ್ವೀಕರಿಸಿ, ತಲಪಬೇಕಾದ ಸ್ಥಳಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ.

ಈ ಮನವಿ ಸಲ್ಲಿಕೆಯಲ್ಲಿ ತಾಲೂಕಾಧ್ಯಕ್ಷ ಶ್ರೀ ಜಯರಾಮ್ ಡಿ. ನಾಯ್ಕ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಸ್.ಆರ್. ನಾಯ್ಕ, ಕಾರ್ಯದರ್ಶಿ ಮಂಜುನಾಥ ನಾಯ್ಕ, ಜಂಟಿ ಕಾರ್ಯದರ್ಶಿ ವಿಜಯಕುಮಾರ್ ಬಿ. ನಾಯ್ಕ, ಖಜಾಂಚಿ ಪಾಂಡುರಂಗ ಬಿ. ನಾಯ್ಕ ಹಾಗೂ ಸಂಘದ ಇತರ ಅನೇಕ ಹಿರಿಯ ಮತ್ತು ಕಿರಿಯ ಸದಸ್ಯರು ಹಾಜರಿದ್ದರು.

ಅವರು ತಮ್ಮ ಮನವಿಯಲ್ಲಿ, “2026ರ ಜನವರಿ 1ರೊಳಗೆ ನಿವೃತ್ತವಾಗುವ ನೌಕರರಿಗೆ ಪಿಂಚಣಿ ಪರಿಷ್ಕರಣೆ ನೀಡದ ನಿರ್ಧಾರವು, ದಿನನಿತ್ಯದ ಖರ್ಚುಗಳು ಮತ್ತು ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸಲು ತೀವ್ರ ಸಂಕಷ್ಟ ಉಂಟು ಮಾಡುತ್ತದೆ. ಆದ್ದರಿಂದ ಈ ತೀರ್ಮಾನವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.

Share This Article