ಅಂಕೋಲಾ ಕಂದಾಯ ಕಚೇರಿಯಲ್ಲಿ ದಾಖಲೆ ಪರದಾಟ: ಭೂ ಸುರಕ್ಷಾ ಯೋಜನೆ ವಿಳಂಬದಿಂದ ಜನರ ನಿರಾಶೆ. ಸ್ಕ್ಯಾನಿಂಗ್ ಪೂರ್ಣಗೊಳ್ಳದೇ ಸಾರ್ವಜನಿಕರಿಗೆ ಕಷ್ಟ – ನೂತನ ತಹಶೀಲ್ದಾರರಿಗೆ ಸಾಲು ಸವಾಲುಗಳು.

News Desk
2 Min Read

ಅಂಕೋಲಾ. ಜುಲೈ 10 – ರಾಜ್ಯ ಸರ್ಕಾರ 2024ರ ಫೆಬ್ರವರಿಯಲ್ಲಿ ಘೋಷಿಸಿದ ಮಹತ್ವಾಕಾಂಕ್ಷೆಯ ‘ಭೂ ಸುರಕ್ಷಾ ಯೋಜನೆ’, ದಾಖಲೆ ವ್ಯವಸ್ಥೆಯ ಡಿಜಿಟಲೀಕರಣದ ದಿಕ್ಕಿನಲ್ಲಿ ದೊಡ್ಡ ಹೆಜ್ಜೆಯಾಗಿದ್ದರೂ, ಅಂಕೋಲಾ ತಾಲೂಕಿನಲ್ಲಿ ಇದರ ಅನುಷ್ಠಾನದಲ್ಲಿ ವಿಳಂಬವಾಗಿದೆ. ಪರಿಣಾಮವಾಗಿ, ನೂರಾರು ಜನರು ತಹಶೀಲ್ದಾರ್ ಕಚೇರಿಗೆ ಅಲೆದಾಡುವ ಸ್ಥಿತಿಗೆ ತಲುಪಿದ್ದಾರೆ.

ಏನಿದು ಭೂ ಸುರಕ್ಷಾ ಯೋಜನೆ?

ಭೂ ಸುರಕ್ಷಾ ಯೋಜನೆಯು ರಾಜ್ಯದ ಕಂದಾಯ ಸಚಿವ ಶ್ರೀ ಕೃಶ್ಣ ಬೈರೇ ಗೌಡ ಅವರ ನೇತೃತ್ವದಲ್ಲಿ ಪ್ರಾರಂಭಗೊಂಡು, ಭೂಮಿಯ ಹಳೆಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಉಳಿಸಿ, ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸುವ ಗುರಿಯೊಂದಿಗೆ 2024ರ ಫೆಬ್ರವರಿಯಲ್ಲಿ ಜಾರಿಗೆ ತರುವ ಮೂಲಕ ಪ್ರಾರಂಭವಾಯಿತು.

ಯೋಜನೆಯ ಅಂಕಿ-ಅಂಶಗಳು:

ರಾಜ್ಯದ ಎಲ್ಲಾ 209 ತಾಲೂಕುಗಳಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದೆ.

ಈಗಾಗಲೇ 15.5 ಕೋಟಿ ಪುಟಗಳು ಡಿಜಿಟಲೀಕರಿ ಸಲಾಗಿದ್ದು, 2025ರ ಅಂತ್ಯದೊಳಗೆ 90 ಕೋಟಿ ಪುಟಗಳ ಡಿಜಿಟಲೀಕರಣ ಗುರಿಯಾಗಿದೆ.

ಒಂದು ಅರ್ಜಿ ಪ್ರತಿಗಾಗಿ ಸಾರ್ವಜನಿಕರು ₹8 ರಷ್ಟು ಮಾತ್ರ ಶುಲ್ಕ ಪಾವತಿಸಿ ದಾಖಲೆ ಪಡೆಯಬಹುದಾಗಿದೆ.

ಅಂಕೋಲಾ ತಾಲೂಕಿನಲ್ಲಿ ಏನಾಗಿದೆ?ಅಂಕೋಲಾ ಕಂದಾಯ ಕಚೇರಿಯಲ್ಲಿ ಈಗಾಗಲೇ ಲಕ್ಷಾಂತರ ಹಳೆಯ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಡಿಜಿಟಲ್ ಪ್ರತಿಗಳನ್ನು ಇನ್ನೂ ಅಪ್ಲೋಡ್ ಮಾಡದೇ ಇರುವ ಕಾರಣದಿಂದ, ಅರ್ಜಿ ಸಲ್ಲಿಸಿದರೂ ಜನರಿಗೆ ದಾಖಲೆ ಸಿಗದೇ ಬಹಳ ಕಾಲ ಕಾಯಬೇಕಾದ ಸ್ಥಿತಿ ನಿರ್ಮಾಣ ವಾಗಿದೆ.ಈ ಹಿಂದೆ, ಅರ್ಜಿ ಕೊಟ್ಟರೂ ಒಂದೇ ವಾರದಲ್ಲಿ ದಾಖಲೆಗಳನ್ನು ನೌಕರರು ದಾಖಲಾತಿ ಕೊಠಡಿಯಿಂದ ತೆಗೆದು ಸಿಗುತ್ತಿದ್ದವು. ಈಗ ಡಿಜಿಟಲ್ ಪ್ರಮಾಣ ಪತ್ರಕ್ಕಾಗಿ ಜನರು ವಾರಗಳು ಕಾಯುವಂತಾಗಿದೆ.

ಯಾವ ನ್ಯೂನತೆಗಳು ಕಂಡುಬರುತ್ತಿವೆ?

ಸ್ಕ್ಯಾನಿಂಗ್ ವಿಳಂಬ: ಹಳೆಯ ದಾಖಲೆಗಳ ಪ್ರಮಾಣ ಹೆಚ್ಚು ಇದ್ದು, ಪೂರ್ಣಗೊಳ್ಳಲು ತಿಂಗಳುಗಳು ಹಿಡಿಯಬಹುದು.

ವಿದ್ಯುತ್ ಕಡಿತದ ತೊಂದರೆ: ಆನ್‌ಲೈನ್ ಸೇವೆ ವಿದ್ಯುತ್ ನಿಲ್ಲುತ್ತಾ ಕೂಡ ತೊಂದರೆ ಗೀಡಾಗುತ್ತದೆ. ಇನ್ವೆಟರ್ ವ್ಯವಸ್ಥೆ ನೀಡಲು ನೂತನ ತಹಶೀಲ್ದಾರ್ ಭರವಸೆ ನೀಡಿದ್ದಾರೆ.

ಸಿಬಂದಿ ಮಾರ್ಗದರ್ಶನದ ಕೊರತೆ: ಅರ್ಜಿದಾರರಿಗೆ ಸ್ಪಷ್ಟ ಮಾಹಿತಿ ನೀಡದೇ ನಿರಾಸೆ ಮೂಡುತ್ತಿದೆ.

ಸರ್ವರ್ ಸಮಸ್ಯೆ: ಕೆಲವೊಮ್ಮೆ ಇಲಾಖಾ ಸರ್ವರ್ ಅಥವಾ ಪೋರ್ಟಲ್ ಕಾರ್ಯ ನಿರ್ವಹಿಸುತ್ತಿಲ್ಲ.

ಸಾರ್ವಜನಿಕರ ಬೇಡಿಕೆಗಳು:

1. ಸ್ಕ್ಯಾನಿಂಗ್ ಪೂರ್ಣಗೊಳ್ಳುವವರೆಗೆ ಹಳೆಯ ವಿಧಾನವನ್ನು ಮುಂದುವರೆಸಿ.

2. ಅರ್ಜಿ ಸ್ವೀಕರಿಸಿದ 7 ದಿನಗಳೊಳಗೆ ದಾಖಲೆ ನೀಡುವ ಪ್ರಕ್ರಿಯೆ ಪುನರ್‌ಪ್ರಾರಂಭಗೊಳ್ಳಲಿ.

3. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ನಿಗದಿತ ಸಮಯಕ್ಕೆ ದಾಖಲೆ ನೀಡುವ ವ್ಯವಸ್ಥೆ ಮಾಡಬೇಕು.

ಅಧಿಕಾರಿಗಳ ಸ್ಪಂದನೆ: ಅಂಕೋಲಾ ತಾಲೂಕಿಗೆ ಹೊಸದಾಗಿ ನೇಮಕವಾದ ಯುವ, ಶಿಸ್ತಿನ ತಹಶೀಲ್ದಾರ್ ಚಿಕ್ಕಪ್ಪ ನಾಯಕ ರವರು ಈ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇನ್ವೆಟರ್‌ಗಳ ವ್ಯವಸ್ಥೆ, ಸಿಬ್ಬಂದಿಗೆ ನಿರ್ದೇಶನ, ಪ್ರಗತಿಯ ಮೇಲ್ವಿಚಾರಣೆ ಮುಂತಾದ ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳಲಿರುವುದಾಗಿ ತಿಳಿಸಿದ್ದಾರೆ.

Share This Article