ಅಂಕೋಲಾ, ಜೂನ್ 16: ಮಳೆಗಾಲ ಆರಂಭವಾಗುತ್ತಿದ್ದಂತೆ ಜ್ವರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ಆರೋಗ್ಯ ಇಲಾಖೆ ವತಿಯಿಂದ ಅಂಕೋಲಾ ಪಟ್ಟಣದಲ್ಲಿ ‘ಟೈರ್ ವಿಲೇವಾರಿ ಪರ್ವ’ ಆರಂಭಿಸಲಾಗಿದೆ.
ಪಟ್ಟಣದ ವಿವಿಧ ಗ್ಯಾರೇಜ್‌ಗಳು ಮತ್ತು ಟೈರ್ ಅಂಗಡಿಗಳಲ್ಲಿ ಸಂಗ್ರಹವಾಗಿರುವ ಹಳೆಯ ಟೈರ್‌ಗಳನ್ನು ಪರಿಶೀಲಿಸಿ, ಅವುಗಳಲ್ಲಿ ನೀರು ನಿಂತಿರುವ ಸಂದರ್ಭಗಳಲ್ಲಿ ತಕ್ಷಣವೇ ವಿಲೇವಾರಿ ಮಾಡುವಂತೆ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆ ಆರೋಗ್ಯ ಇಲಾಖೆಯ ವಿಶೇಷ ಕಾರ್ಯಯೋಜನೆಯ ಭಾಗವಾಗಿದೆ.
ತಾಲೂಕಾ ಆರೋಗ್ಯಾಧಿಕಾರಿ ಡಾ. ಜಗದೀಶ್ ಡಿ. ನಾಯ್ಕ ಅವರು ಮಾತನಾಡಿ, “ಇತ್ತೀಚಿನ ನಿರಂತರ ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ನೀರು ನಿಂತಿದ್ದು, ಇದು ಡೆಂಗ್ಯೂ ಜ್ವರದ ಹರಡುವಿಕೆಗೆ ಅನುವು ಮಾಡಿಕೊಡುತ್ತಿದೆ. ಇಂತಹ ಸಂದರ್ಭಗಳಲ್ಲಿ ಜ್ವರಗಳ ನಿಯಂತ್ರಣಕ್ಕಾಗಿ ಸಾರ್ವಜನಿಕ ಜಾಗೃತಿಯು ಬಹಳ ಮುಖ್ಯ,” ಎಂದು ತಿಳಿಸಿದರು.

ಡೆಂಗ್ಯೂ ಹಾಗೂ ಇತರ ವೈರಲ್ ಜ್ವರಗಳ ಪ್ರಭಾವದ ಹಿನ್ನೆಲೆಯಲ್ಲಿ, ಸೋಂಕು ಪತ್ತೆಯಾದ ಪ್ರದೇಶದ ಸುತ್ತಲಿನ 50 ಮನೆಗಳಲ್ಲಿ ಮನೆ-ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಆರೋಗ್ಯ ತಂಡಗಳು ನೀರಿನ ಸಂಗ್ರಹಣೆ ಇರುವ ಸ್ಥಳಗಳನ್ನು ಪರಿಶೀಲಿಸಿ, ಸೊಳ್ಳೆಗಳ ಸಂಭಾವ್ಯ ಉತ್ಪತ್ತಿ ಸ್ಥಳಗಳನ್ನು ತೆಗೆದುಹಾಕುತ್ತಿದ್ದಾರೆ.
ಸೊಳ್ಳೆ ಕಡಿತವನ್ನು ತಡೆಗಟ್ಟುವುದು ಹಾಗೂ ಅವರ ಸಂತಾನೋತ್ಪತ್ತಿ ಸ್ಥಳಗಳನ್ನು ನಿರ್ಮೂಲನೆ ಮಾಡುವುದು ಡೆಂಗ್ಯೂ ತಡೆಗಟ್ಟುವ ಪ್ರಮುಖ ಮಾರ್ಗಗಳಾಗಿವೆ ಎಂದು ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ.

ಸಾರ್ವಜನಿಕರು ತಮ್ಮ ಮನೆಯ ಟ್ಯಾಂಕ್, ಡ್ರಮ್, ಬಕೆಟ್, ಬ್ಯಾರೆಲ್ ಮುಂತಾದ ನೀರು ಸಂಗ್ರಹಿಸುವ ಪಾತ್ರೆಗಳನ್ನು ವಾರಕ್ಕೆ ಕನಿಷ್ಠ ಒಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಿ, ನಂತರ ತಾಜಾ ನೀರನ್ನು ತುಂಬಬೇಕು. ಅವುಗಳನ್ನು ಮುಚ್ಚಿ ಇಡುವುದು ಬಹುಮುಖ್ಯವಾಗಿದೆ ಎಂದು ಅವರು ಮನವರಿಕೆ ಮಾಡಿಕೊಟ್ಟರು.
ತಾಲೂಕಿನ ವಿವಿಧ ಗ್ರಾಮಗಳಲ್ಲೂ ಈ ಜಾಗೃತಿ ಅಭಿಯಾನ ಮುಂದುವರೆದಿದ್ದು, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಗಣಪತಿ ನಾಯ್ಕ್ ಅವರು ಹಲವೆಡೆ ಪರಿಶೀಲನೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ವರದಿ: ಕಿರಣ ಚಂದ್ರಹಾಸ ಗಾಂವಕರ್

