ಅಂಕೋಲಾ ಜುಲೈ 29: ಅಂಚೆ ಇಲಾಖೆಯಲ್ಲಿ ತನ್ನ ಶ್ರದ್ಧಾ, ನಿಷ್ಠೆ ಮತ್ತು ಶುದ್ಧತೆಯ ಸೇವೆಯಿಂದ ಎಲ್ಲರ ಮನಗೆದ್ದಿರುವ ಅಂಕೋಲಾ ತಾಲೂಕಿನ ಬೆಲೆಕೇರಿ ಗ್ರಾಮದ ಮಹಾಬಲೇಶ್ವರ ವಾಸುದೇವ ನಾಯ್ಕ್ ಅವರು ಇದೇ ಜುಲೈ 31 ರಂದು ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ.
ಇವರು 1991 ರಲ್ಲಿ ಬೆಲೆಕೇರಿ ಅಂಚೆ ಕಚೇರಿಯಲ್ಲಿ ತಮ್ಮ ಕರ್ತವ್ಯ ಆರಂಭಿಸಿ, ಕಳೆದ 15 ವರ್ಷಗಳಿಂದ ಅಂಕೋಲಾ ಪಟ್ಟಣದ ಮುಖ್ಯ ಅಂಚೆ ಕಚೇರಿಯಲ್ಲಿ ಪೋಸ್ಟ್‌ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕರ್ತವ್ಯದ ಹೊಣೆಗಾರಿಕೆ ಯನ್ನು ಅತ್ಯಂತ ಪ್ರಾಮಾಣಿಕತೆ ಯಿಂದ ನಿರ್ವಹಿಸಿದ ಇವರು, ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಜನರ ಮನೆ ಬಾಗಿಲಿಗೆ ಪತ್ರಗಳನ್ನು, ಸರ್ಕಾರಿ ದಾಖಲೆಗಳನ್ನು, ನಿವೃತ್ತಿದಾರರ ವೇತನಗಳನ್ನು, ಪಿಂಚಣಿ ಮಾಹಿತಿ ಹಾಗೂ ಆಧಾರ್ ಅಪ್‌ಡೇಟ್ ಸೇವೆಗಳನ್ನು ತಲುಪಿಸುತ್ತಿದ್ದರು.

ಅವರು ಕಾರ್ಯನಿರ್ವಹಿಸುತ್ತಿದ್ದ ಪ್ರದೇಶಗಳಲ್ಲಿ ಹುಲಿದೇವರವಾಡ, ಅಂಬರಕೊಡ್ಲಾ, ಮಠಕೇರಿ, ತೆಂಕಣಕೇರಿ, ಕುಂಬಾರಕೆರಿ, ಲಕ್ಷ್ಮೇಶ್ವರ ರಸ್ತೆ ಮತ್ತು ಸುಂದರನಾರಾಯಣ ದೇವಸ್ಥಾನ ರಸ್ತೆ ಸೇರಿದಂತೆ ಅನೇಕ ಬಡಾವಣೆಗಳು ಒಳಗೊಂಡಿದ್ದವು. ಈ ಎಲ್ಲ ಕಡೆಗಳಲ್ಲಿ ಅವರ ನಗುನಗುವಿನ ಮುಖ, ಸಮಯ ಪಾಲನೆ ಹಾಗೂ ಪ್ರಾಮಾಣಿಕ ಸೇವೆ ಜನರ ಮೆಚ್ಚುಗೆಗೆ ಪಾತ್ರವಾಯಿತು. ಹಿರಿಯ ನಾಗರಿಕರು, ಅಂಗವಿಕಲರು, ಅಂಗಡಿ ವ್ಯಾಪಾರಸ್ಥರು, ವಿದ್ಯಾರ್ಥಿಗಳು ಎಲ್ಲರಿಗೂ ಸಮಾನವಾಗಿ ಪರಿಚಿತನಾಗಿದ್ದ ಇವರು ತಮ್ಮ ಕರ್ತವ್ಯದಲ್ಲಿ ಯಾವುದೇ ಜಾತಿ, ಧರ್ಮ, ಪಕ್ಷಪಾತವಿಲ್ಲದೆ ಕೆಲಸ ಮಾಡಿದ ಧರ್ಮನಿಷ್ಠ ವ್ಯಕ್ತಿಯಾಗಿದ್ದರು.
ಸಾಮಾನ್ಯವಾಗಿ ಸರ್ಕಾರಿ ಉದ್ಯೋಗಿಗಳಿಗೆ ಕೆಲವೊಂದು ದೂರುಗಳು ಸಹಜ. ಆದರೆ ಮಹಾಬಲೇಶ್ವರ ನಾಯ್ಕ್ ಅವರು ಕರ್ತವ್ಯವನ್ನು ಧರ್ಮವಾಗಿ ನಿಭಾಯಿಸಿದರು. ಅವರೊಬ್ಬ ಶಿಷ್ಟಾಚಾರಿ, ಶ್ರಮಿಕ ಮತ್ತು ತಾಳ್ಮೆಯ ಸ್ವಭಾವದ ವ್ಯಕ್ತಿ, ಬಹುಮಾನ, ಪ್ರಶಸ್ತಿ, ಪಟ್ಟಿ ಇಲ್ಲದಿದ್ದರೂ ಜನರ ಪ್ರೀತಿ ಎಂಬ ಅಮೂಲ್ಯ ಸಿಕ್ಕಿತೆಂಬುದು ಅವರ ಬದುಕಿನ ಹೆಮ್ಮೆ. ತಮ್ಮ ಸರಳ ಜೀವನ ಶೈಲಿ ಹಾಗೂ ಕರ್ತವ್ಯದ ಮೇಲಿನ ಪ್ರೀತಿ ಇತರರಿಗೆ ಮಾದರಿ ಎಂಬಂತೆ ಅನೇಕ ಸಹೋದ್ಯೋಗಿಗಳು ಹೇಳಿದ್ದಾರೆ.

ಅವರು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಬದುಕುತ್ತಿರುವ ಮಹಾಬಲೇಶ್ವರ ನಾಯ್ಕ್‌ರ ಜೀವನ ಸದಾ ಸರಳವಾಗಿತ್ತು. ಅವರಿಗೆ ನಿವೃತ್ತಿಯ ದಿನ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರು, ಸಹೋದ್ಯೋಗಿಗಳು ಹಾಗೂ ಸ್ನೇಹಿತರು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತಿದ್ದು, ಅವರ ಮುಂದಿನ ಜೀವನ ಶಾಂತಿ ಮತ್ತು ಆರೋಗ್ಯದಿಂದ ಸಾಗಲೆಂದು ಹಾರೈಸುತ್ತಿದ್ದಾರೆ.
ಜನರ ಹೃದಯದಲ್ಲಿ ಮನೆ ಮಾಡಿರುವ ಇಂಥವರ ನಿವೃತ್ತಿ ಸುದ್ದಿ ಕೇಳಿದರೂ ಒಂದು ರೀತಿ ಖಾಲಿತನವೇ ಸೃಷ್ಟಿಯಾಗುತ್ತದೆ. ಇಂತಹ ನಗುವಿನ ಮುಖದ, ಶ್ರದ್ಧಾ ಮತ್ತು ಸೇವೆಯ ಪ್ರತಿರೂಪವಾದ ಪೋಸ್ಟ್ ಮ್ಯಾನ್ ಅಣ್ಣಂದಿರನ್ನು ಮತ್ತೆ ಮತ್ತೆ ನಾವು ನೋಡಬೇಕೆನಿಸುತ್ತದೆ.ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂಬುದೇ ಎಲ್ಲರ ಹಾರೈಕೆ.ಇನೊಮ್ಮೆ ಮಹಾಬಲೇಶ್ವರ ಅಣ್ಣರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ವಂದನೆಗಳು.
ವರದಿ: ಕಿರಣ ಚಂದ್ರಹಾಸ ಗಾಂವಕರ್

