ಅಂಕೋಲಾದ ಹಿಚ್ಕಡ್ ಕ್ರಾಸ್ ಹೆದ್ದಾರಿಯಲ್ಲಿ ಪಲ್ಟಿಯಾದ ಬಾಳೆಕಾಯಿ ಪಿಕಪ್: ನಿಯಂತ್ರಣ ತಪ್ಪಿ ಡಿವೈಡರ್ ಕಂಬಕ್ಕಪ್ಪಳಿಸಿದ ಕಾರು..!!

News Desk
1 Min Read

ಅಂಕೋಲಾ: ತಾಲೂಕಿನ ಹಿಚ್ಕಡ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಾಳೆಕಾಯಿ ತುಂಬಿದ ಮಿನಿ ಪಿಕಪ್ ವಾಹನವೊಂದು ರಸ್ತೆಯ ಮಧ್ಯೆ ಪಲ್ಟಿಯಾದ ಪರಿಣಾಮ, ಅದರ ಹಿಂದೆಯೇ ಬರುತ್ತಿದ್ದ ಕಾರೊಂದು ಅಪಘಾತವನ್ನು ತಪ್ಪಿಸಲು ಹೋಗಿ ಡಿವೈಡರ್ ಏರಿ ಲೈಟ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಘಟನೆ ಜರುಗಿದೆ. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ದೊಡ್ಡ ಮಟ್ಟದ ಪ್ರಾಣಹಾನಿ ಸಂಭವಿಸಿಲ್ಲ.

ಅಂಕೋಲಾ ಕಡೆಗೆ ಸಾಗುತ್ತಿದ್ದ ಮಿನಿ ಪಿಕಪ್ ವಾಹನವು ಹಿಚ್ಕಡ ಕ್ರಾಸ್ ಬಳಿ ಬರುತ್ತಿದ್ದಂತೆ ಏಕಾಏಕಿ ವಾಹನದ ನಿಯಂತ್ರಣ ತಪ್ಪಿದ ಪರಿಣಾಮ ವಾಹನವು ರಸ್ತೆಯ ಮೇಲೆಯೇ ಪಲ್ಟಿಯಾಗಿದೆ. ಮಿನಿ ಪಿಕಪ್ ಪಲ್ಟಿಯಾಗುತ್ತಿದ್ದಂತೆಯೇ, ಅದರ ಹಿಂದೆಯೇ ಬರುತ್ತಿದ್ದ ನಿಸಾನ್ ಕಂಪನಿಯ ಕಾರಿನ ಚಾಲಕ ತಕ್ಷಣವೇ ಎಚ್ಚೆತ್ತುಕೊಂಡಿದ್ದಾರೆ. ಮುಂದಾಗುತ್ತಿದ್ದ ಭೀಕರ ದುರಂತವನ್ನು ಹಾಗೂ ಪ್ರಾಣಾಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಕಾರನ್ನು ತಕ್ಷಣವೇ ರಸ್ತೆಯ ಬದಿಗೆ ತಿರುಗಿಸಿದ್ದಾರೆ. ಆದರೆ, ವಾಹನದ ವೇಗ ನಿಯಂತ್ರಣಕ್ಕೆ ಬಾರದೆ ಕಾರು ನೇರವಾಗಿ ರಸ್ತೆಯ ಡಿವೈಡರ್ ಮೇಲಿದ್ದ ವಿದ್ಯುತ್ ದೀಪದ ಕಂಬಕ್ಕೆ ಅಪ್ಪಳಿಸಿ ನಿಂತಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಪಿಕಪ್ ವಾಹನಕ್ಕೂ ಹಾನಿಯಾಗಿದೆ.ಅಪಘಾತದ ತೀವ್ರತೆಗೆ ವಾಹನಗಳಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ನಡೆದ ತಕ್ಷಣವೇ ಸ್ಥಳಕ್ಕಾಗಮಿಸಿದ ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಅಂಕೋಲಾ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಹೆದ್ದಾರಿಯ ಮಧ್ಯೆಯೇ ವಾಹನಗಳು ಪಲ್ಟಿಯಾಗಿ ಬಿದ್ದಿದ್ದರಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Share This Article